ಶಿವಕುಮಾರ್‌ ತಪ್ಪು ಮಾಡಿಲ್ಲವಾದಲ್ಲಿ ವ್ಯರ್ಥ ಹೇಳಿಕೆ ಬಿಟ್ಟು ಕಾನೂನು ಪ್ರಕಾರ ಹೋರಾಡಿ ಗೆಲ್ಲಲಿ: ಜಗದೀಶ್ ಶೆಟ್ಟರ್ ವಾಗ್ದಾಳಿ

ಹೊಸದಿಗಂತ ವರದಿ, ಹುಬ್ಬಳ್ಳಿ:
ಮೂರು ಮತ್ತು ನಾಲ್ಕನೇ ರಂಗ ಬಂದರೂ ಬಿಜೆಪಿಗೆ ಸವಾಲೊಡ್ಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಅವರ ರಾಷ್ಟ್ರೀಯ ನಾಯಕತ್ವ, ಜಗತ್ತಿನ ನಾಯಕತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಮೂರನೇ ರಂಗ ಆದರೂ ಮಾಡಿಕೊಳ್ಳಲಿ, ನಾಲ್ಕನೇ ರಂಗ ಆದರೂ ಮಾಡಿಕೊಳ್ಳಲಿ, ಐದನೇ ರಂಗ ಆದರೂ ಮಾಡಿಕೊಳ್ಳಲಿ ಅದು ಅವರಿಗೆ ಬಿಟ್ಟದ್ದು ಎಂದು ಪರೋಕ್ಷವಾಗಿ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಟಾಂಗ್ ಕೊಟ್ಟರು.
ಬೇರೆ ಬೇರೆ ಪಕ್ಷದವರು ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ನಿನ್ನೇ ಜೆಡಿಎಸ್ ವರಿಷ್ಠರ ದೇವೆಗೌಡರ ನೇತೃತ್ವದಲ್ಲಿ ನಡೆದ ತೃತೀಯ ರಂಗ ರಚನೆ ಕುರಿತಂತೆ ನಡೆದ ಚರ್ಚೆ ಕುರಿತು ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಕಡೆಗೆ ಅವರೇ ರಾಜಕೀಯವಾಗಿ ಆರೋಪ ಮಾಡುತ್ತಾರೆ. ಮತ್ತೊಂದು ಕಡೆಗೆ ಕಾನೂನಿನ ಮೇಲೆ ಗೌರವವಿದೆ. ಕಾನೂನು ರೀತಿ ಹೋರಾಟ ಮಾಡುತ್ತೇನೆ ಎನ್ನುತ್ತಾರೆ. ಡಿ‌.ಕೆ‌‌‌‌.ಶಿವಕುಮಾರ್ ಅವರಿಗೆ ಕಾನೂನಿನ ಮೇಲೆ ಗೌರವ ಇದ್ದರೆ, ಅವರದ್ದು ತಪ್ಪು ಇರಲಿಲ್ಲ ಎಂದಾದರೆ ಕಾನೂನು ಪ್ರಕಾರ ಹೋರಾಟ ಮಾಡಲಿ ಅದು ಬಿಟ್ಟು ಎಲ್ಲದಕ್ಕೂ ರಾಜಕೀಯಕರಣ ಮಾಡೋದಕ್ಕೆ ಹೋಗಬೇಡಿ ಎಂದು ಹರಿಹಾಯ್ದರು.
ಹು-ಧಾ ಮೇಯರ್ ಉಪಮೇಯರ್ ಚುನಾವಣೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಇಂದು ಸಂಜೆ ಸಭೆ ಕರೆಯಲಾಗಿದೆ. ಅಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮೇಯರ್ ಉಪಮೇಯರ್ ಆಯ್ಕೆ ಮಾಡಲಾಗುವುದು ಎಂದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!