ಯುದ್ಧದ ಭೀಕರತೆ ನೆನೆದರೆ ಈಗಲೂ ಭಯವಾಗುತ್ತಿದೆ: ಚಂದನ್

ಹೊಸದಿಗಂತ ವರದಿ,ಮಡಿಕೇರಿ:

‘ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ಧದ ಭೀಕರತೆ ಬಗ್ಗೆ ನೆನೆಸಿಕೊಂಡರೆ ಈಗಲೂ ನಮಗೆ ಭಯವಾಗುತ್ತದೆ. ಅಲ್ಲಿ ನಡೆಯುತ್ತಿದ್ದ ಯುದ್ಧದ ಶಬ್ದಗಳು ಈಗಲೂ ಇಲ್ಲೇ ಯುದ್ಧ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಆ ಶಾಕ್’ನಿಂದ ಹೋರ ಬರಲು ಕೆಲವು ದಿನಗಳೇ ಬೇಕು ಎಂದು ಉಕ್ರೇನ್’ನ ಯುದ್ಧಭೂಮಿ ಕಾರ್ಕೀವ್’ನಿಂದ ತಾಯ್ನಾಡಿಗೆ ಮರಳಿದ ಚಂದನ್ ಗೌಡ ಹಾಗೂ ಬಿ.ಕೆ.ಲಿಖಿತ್ ಯುದ್ಧದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
ತಮ್ಮ ಕೊಠಡಿಯಲ್ಲಿ ಜೊತೆಯಾಗಿದ್ದ ಮೃತ ನವೀನ್’ನನ್ನು ಸ್ಮರಿಸಿದ ಅವರು, ಕಳೆದ ಎರಡು ವರ್ಷ ನವೀನ್ ನಾವು ಒಟ್ಟಿಗೇ ಇದ್ದೆವು. ಅವನ ಅಗಲಿಕೆ ಕೂಡಾ ನಮಗೆ ಬಹಳ ಬೇಸರ ತಂದಿದೆ. ಖಾರ್ಕಿವ್ ಪ್ರದೇಶದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ನಮ್ಮ ಯುನಿವರ್ಸಿಟಿ ಪಕ್ಕದ ಸಾಕಷ್ಟು ಯುನಿವರ್ಸಿಟಿಗಳು ಈಗಾಗಲೇ ನಾಮಾವಶೇಷವಾಗಿದ್ದು, ನಮ್ಮ ಯುನಿವರ್ಸಿಟಿ ಉಳಿಯುತ್ತದೋ ಇಲ್ಲವೋ ಎಂಬ ಸಂಶಯ ವ್ಯಕ್ತಪಡಿಸಿದರು.
ಸದ್ಯ ನಾವು ತಾಯ್ನಾಡಿಗೆ ತಲುಪಿದ್ದೇವೆ. ಇದು ಬಹಳ ಸಂತೋಷ ತಂದಿದೆ. ನಮ್ಮ ಜೊತೆ ಇರುವ ಅನೇಕ ಸ್ನೇಹಿತರು ಅಲ್ಲಿಯೇ ಇದ್ದಾರೆ. ಅವರೂ ಬಂದರೆ ಮತ್ತಷ್ಟು ಖುಷಿಯಾಗುತ್ತದೆ ಎಂದು ವಿದ್ಯಾರ್ಥಿಗಳು ನುಡಿದರು.
ಹೌದು, ಉಕ್ರೇನ್-ರಷ್ಯಾ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಶುಕ್ರವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಸಾವಿರಾರು ಭಾರತೀಯರು ಯುದ್ಧ ಪೀಡಿತ ಪ್ರದೇಶವನ್ನು ಕಂಡು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಮಕ್ಕಳ ಪರಿಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದಾರೆ. ಇನ್ನೂ ಕೆಲವು ಪೋಷಕರು ಮಕ್ಕಳಿಗೆ ಧೈರ್ಯ ತುಂಬಿ ಯುದ್ಧ ಪೀಡಿತ ಪ್ರದೇಶದಿಂದ ಹೊರಡುವ ಪ್ರಯತ್ನ ಮಾಡುವಂತೆ ಹೇಳುತ್ತಿದ್ದಾರೆ. ಇದರಿಂದಾಗಿ ಅಲ್ಲಿರುವ ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ತಾಯ್ನಾಡಿಗೆ ಮರಳುತ್ತಿದ್ದಾರೆ.
ಕೊಡಗು ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಕೂಡಾ ಹೈ ರಿಸ್ಕ್ ತೆಗೆದುಕೊಂಡು ಖಾರ್ಕಿವ್ ನಗರದಿಂದ ಸ್ವಂತ ರಿಸ್ಕ್’ನಲ್ಲಿ ತಾಯ್ನಾಡಿಗೆ ಆಗಮಿಸಿದ್ದಾರೆ. ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಲು ಹೋದ ಕರ್ನಾಟಕದ ವಿದ್ಯಾರ್ಥಿಗಳು ಕೂಡಾ ಈ ಯುದ್ಧವನ್ನು ಕಂಡು ಕಂಗಾಲಾಗಿದ್ದಾರೆ. ಹೇಗಾದರೂ ಮಾಡಿ ತಮ್ಮ ತಾಯ್ನಾಡಿಗೆ ಹೋಗಬೇಕೆಂದು ಕಾಲ್ನಡಿಗೆಯಲ್ಲೇ ಕೆಲವು ವಿದ್ಯಾರ್ಥಿಗಳು ನೆರೆಯ ನಗರಗಳಿಗೆ ತೆರಳುವ ಸಾಹಸ ಮಾಡುತ್ತಿದ್ದಾರೆ.
ಕೊಡಗು ಜಿಲ್ಲೆಯ 19 ವಿದ್ಯಾರ್ಥಿಗಳ ಪೈಕಿ ಈಗಾಗಲೇ ನಾಲ್ವರು ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ತಮ್ಮ ಊರಿಗೆ ಮರಳಿದ್ದಾರೆ. ಚಂದನ್ ಗೌಡ ಹಾಗೂ ಲಿಖಿತ್ ಕೂಡಾ ಊಟ, ತಿಂಡಿ ಇಲ್ಲದೆ ಸುಮಾರು 16 ಗಂಟೆ ರೈಲಿನಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿ, ಅಲ್ಲಿಂದ ಬಸ್’ನಲ್ಲಿ, ವಿಮಾನದಲ್ಲಿ ಹೇಗೂ ತಾಯ್ನಾಡು ತಲುಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!