ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಗೊಂಡರೆ , ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗಳು ನಡೆದಲ್ಲಿ ಆಡಳಿತ ಯಂತ್ರದ ಸುಗಮ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ. ದೇಶದ ಪ್ರಗತಿಯ ದೃಷ್ಟಿಯಿಂದ ಇದು ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸಭೆಯಲ್ಲಿ ಇಂದು ‘ ಒಂದು ದೇಶ, ಒಂದು ಚುನಾವಣೆ’ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಭಟನೆಯ ನಡುವೆ ಸ್ಪೀಕರ್ ಭಾಷಣ ಮುಗಿದ ತಕ್ಷಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಈ ಬಗ್ಗೆ ವ್ಯಾಪಕ ಚರ್ಚೆ ನಡೆದು ಭಾರತದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಯುವ ಪದ್ಧತಿ ಅನುಷ್ಠಾನಕ್ಕೆ ಬರಲಿ. ಅನಗತ್ಯ ಖರ್ಚು, ವೆಚ್ಚಗಳು ಮತ್ತು ಮಾನವ ದಿನಗಳ ಉಳಿತಾಯ ಇದರಿಂದ ಸಾಧ್ಯವಾಗಲಿದೆ ಎಂದು ಸಿಎಂ ಹೇಳಿದರು.
ಎಲ್ಲಾ ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಗಳು ಸಂಸತ್ತಿನ ಉಭಯ ಸದನಗಳಲ್ಲಿ ಹಾಗೂ ರಾಜ್ಯದ ವಿಧಾನಮಂಡಲಗಳಲ್ಲಿ ಇದರ ಕುರಿತು ಚಿಂತನ-ಮಂಥನ ನಡೆಸಿದರೆ ಮಾತ್ರ ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದರು.
ಕಾಲಕಾಲಕ್ಕೆ ಖಾಲಿಯಾಗುವ ಶಾಸಕರು, ಮತ್ತಿತರ ಸ್ಥಾನಗಳಿಸಬೇಕು. ಉಪಚುನಾವಣೆ ಇಲ್ಲದೆ ತುಂಬುವ ವ್ಯವಸ್ಥೆಗೆ ನಾಂದಿ ಹಾಡಬೇಕಾಗಿದೆ. ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ಮತದಾರರ ಹಿತಕ್ಕೆ ಯಾವುದೇ ಧಕ್ಕೆಯಾಗದಂತೆ ಚುನಾವಣೆ ನಡೆಸುವುದು ಮುಖ್ಯ. ಆಡಳಿತ ಸುಧಾರಣೆಯ ದಿಕ್ಕಿನಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಮಹತ್ವದ ಹೆಜ್ಜೆಯಾಗಲಿದೆ ಎಂದು ತಿಳಿಸಿದರು.
ಆಳವಾದ ಅಧ್ಯಯನ ಮತ್ತು ಸಮಾಲೋಚನೆ, ಸವಿಸ್ತಾರವಾದ ಚರ್ಚೆ ನಡೆಯಬೇಕು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿರುವ ನಮಗೆ ಚುನಾವಣೆಯಲ್ಲಿ ಏಕರೂಪ ವ್ಯವಸ್ಥೆ ಜಾರಿಗೆ ತರುವುದು ಕಷ್ಟವೇನಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ವಿಧಾನಮಂಡಲವು ಸಂಕ್ಷಿಪ್ತ ನಿರ್ಣಯ ಕೈಗೊಂಡು ಶಿಫಾರಸು ಮಾಡಲಿ ಎಂದು ಸಿಎಂ ಆಶಿಸಿದರು.