Wednesday, August 17, 2022

Latest Posts

ಪಕ್ಷದ ಅಭ್ಯರ್ಥಿಗಳ ಪರ ಸಚಿವರು ಪ್ರಚಾರ ಮಾಡಿದರೆ ಇವರಿಗೇನು ಕಷ್ಟ: ಡಿಕೆಶಿಗೆ ಸಿಎಂ ಬೊಮ್ಮಾಯಿ ತಿರುಗೇಟು

ಹೊಸದಿಗಂತ ವರದಿ,ಹಾವೇರಿ:

 

ವಿಧಾನಸಭೆಗೆ ಬೀಗ ಹಾಕಿಲ್ಲ. ಕೆಲಸ ಕಾರ್ಯಗಳು ನಿರಂತರವಾಗಿ ಸಾಗಿವೆ. ಸಚಿವ ಸಂಪುಟದಲ್ಲಿ ಒಗ್ಗಟ್ಟಿದೆ. ಸಚಿವರು ಎರಡು ಮೂರು ದಿನಕ್ಕೊಮ್ಮೆ ಬಂದು ಹೋಗಿ ಉಪ ಚುನಾವಣಾ ಪ್ರಚಾರ ಮಾಡಿ ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಹಾನಗಲ್ಲದ ಉದಾಸಿ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟೀಕಿಸಿದಂತೆ ವಿಧಾನಸಭೆಗೆ ಬೀಗಹಾಕುವುದಕ್ಕೆ ಎಂದಾದರೂ ಸಾಧ್ಯವೇ? ನಮ್ಮ ಸಚಿವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವದರಿಂದ ಇವರಿಗೇನು ಕಷ್ಟ. ಅವರು ಸೋಲಿನ ಭಯದಿಂದ ಹೀಗೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಪ್ರಸಕ್ತ ಉಪ ಚುನಾವಣೆಯಲ್ಲಿ ನನ್ನ ಮೇಲೆ ನೇರವಾಗಿ ಗುರಿಯಾಗಿಸಿಕೊಂಡು ಸಿದ್ದರಾಮಯ್ಯ ಮಾತನಾಡುವುದು ಜನರ ಭಾವನೆಗಳಿಗೆ ವಿರುದ್ಧವಾದಂತಾಗುವುದರಿಂದ. ಕೇವಲ ಸುಳ್ಳಿನ ಕಂತೆಯ ಮೇಲೆ ಚುನಾವಣೆ ಮಾಡುವುದು ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ವ್ಯತಿರಿಕ್ತವಾದ ಪರಿಣಾಮ ಬೀರುವುದು ಸ್ಪಷ್ಟವಾಗುತ್ತದೆ. ಯಡಿಯೂರಪ್ಪ ಅವರ ಕರ್ಮಕಾಂಡವೇ ಇಲ್ಲ ಎಂದ ಮೇಲೆ ಅದರಲ್ಲಿ ನನ್ನ ಪಾತ್ರೆಲ್ಲಿಂದ ಬರುತ್ತದೆ. ನನ್ನ ವಿರುದ್ಧ ಮಾತನಾಡಿದರೆ ಅವರಿಗಂತು ಲಾಭವಾಗುವುದಿಲ್ಲ ಇದರಿಂದ ನಮಗಂತೂ ಲಾಭವಾಗುತ್ತದೆ. ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಆಗಲಿದ್ದಾರೆ ಎಂದು ಹೇಳಿದರು.
ಸಿ.ಎಂ.ಉದಾಸಿ ಅವರ ನಿಧನದಿಂದಾಗಿನೇ ಅನಿವಾರ್ಯವಾಗಿ ಈ ಉಪ ಚುನಾವಣೆ ಆಗಮಿಸಿದೆ. ಅವರು ಮಾಡಿದ ಸಾಧನೆಗಳ ಕುರಿತು ಮಾತನಾಡಬಾರದೇ?ಈ ಕ್ಷೇತ್ರದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ಪದೇ ಪದೇ ನಾವು ಕಾಂಗ್ರೆಸ್ಸಿಗರಿಗೆ ಹೇಳುತ್ತಿದ್ದೇವೆ. ಆದರೂ ನಿಧನರಾಗಿರುವ ಸಿ.ಎಂ.ಉದಾಸಿ ಅವರ ಬಗ್ಗೆನೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ಸಿನ ಇಬ್ಬರು ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರರಿಗೆ ಅಭಿವೃದ್ಧಿ ಬೇಕಾಗಿಲ್ಲ ಅಭಿವೃದ್ಧಿಪರ ಮಾತುಗಳನ್ನು ಬಿಟ್ಟು ಬೇರೆ ಬೇರೆಯದನ್ನೇ ಮಾತನಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯ ಬಿಟ್ಟು ಜಾತಿ ಕುರಿತು ಮಾತನಾಡಿದ್ದು ಕಾಂಗ್ರೆಸ್ಸಿಗರು ಮೊದಲು ನಾವಲ್ಲ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
ಹಾನಗಲ್ಲ ಜನತೆಯ ಅಭಿವೃದ್ಧಿಗಾಗಿ, ಹಾನಗಲ್ಲದ ಏಳಿಗೆಗಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆಯೇ ಹೊರತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಪುರುಷಾರ್ಥಕ್ಕಾಗಿ ಪ್ರಣಾಳಿಕೆಯನ್ನು ಪ್ರಕಟ ಮಾಡಿಲ್ಲ ಎಂದು ತಿಳಿಸಿದರು.
ಯಾವುದಾದರೂ ಒಂದು ಕೆಲಸವನ್ನು ಮಾಡಿ ಸ್ಥಗಿತಗೊಳಿಸುವುದು ಕಾಂಗ್ರೆಸ್ಸಿನ ಚಿಂತನೆ. ನಾವು ಹಾನಗಲ್ಲನ್ನು ಒಂದು ವ್ಯವಸ್ಥಿತವಾಗಿ ಬೆಳೆಸುವ ದೂರ ದೃಷ್ಠಿಯ ಕಲ್ಪನೆಯನ್ನು ಇಟ್ಟುಕೊಂಡಿದ್ದೇವೆ, ಈ ಹಿಂದೆ ಆಗದೇ ಇರುವ ಹಲವಾರು ಆಯಾಮಗಳನ್ನು ಅದರಲ್ಲಿ ಸೇರ್ಪಡೆ ಮಾಡಲಾಗಿದೆ. ಪ್ರಣಾಳಿಕೆ ನೀಡುವುದು ಹೊಸತನದಿಂದ ಕೂಡಿರುವುದರಿಂದ ಕಾಂಗ್ರೆಸ್ಸಿಗರಿಗೆ ಅಂಜಿಕೆಯಾಗಿದೆ. ಪ್ರಣಾಳಿಕೆ ನೀಡುವಂತಹ ಚಿಂತನೆಗಳು ಕಾಂಗ್ರೆಸ್ಸಿಗರಿಗೆ ಬರುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಶಿವಕುಮಾರ ಉದಾಸಿ, ಎನ್.ರವಿಕುಮಾರ, ಬಿಜೆಪಿ ಅಭ್ಯರ್ಥಿ ಶೀವರಾಜ ಸಜ್ಜನರ, ರಾಜ್ಯ ಮಾಧ್ಯಮ ಸಂಯೋಜಕ ಪ್ರಶಾಂತ ಕಡಂಜಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!