ಒಲೆ ಹೊತ್ತಿ ಉರಿದರೆ, ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು: ಭವಿಷ್ಯ ನುಡಿದ ಕೋಡಿಮಠ ಶ್ರೀ!

ಹೊಸದಿಗಂತ ವರದಿ,ಹೊಸಪೇಟೆ:

ರಾಜ್ಯದಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬರಲಿದ್ದು ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರಕಾರಕ್ಕೆ ಅಸ್ಥಿತ್ವಕ್ಕೆ ಬರುವುದಿಲ್ಲ ಎಂದು ಕೋಡಿಮಠದ ಪೀಠಾಧ್ಯಕ್ಷ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ನಗರದ ಸಂಡೂರು ರಸ್ತೆಯ ಬಿಜೆಪಿ ನಾಯಕಿ ರಾಣಿ ಸಂಯುಕ್ತಾ ಅವರ ಮನೆಯಲ್ಲಿ ಶುಕ್ರವಾರ ಪಾದಪೂಜೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಒಲೆ ಹತ್ತಿ ಉರಿದರೆ ನಿಲ್ಲಬಹುದು. ಧರೆಯೇ ಹತ್ತಿ ಉರಿದರೆ ನಿಲ್ಲದು. ರಾಜ್ಯ ರಾಜಕೀಯದಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು.

ಒಲೆ ಹೊತ್ತಿ ಉರಿದರೆ ನಿಲ್ಲಬಹುದು. ಅದರಿಂದ ಅಡುಗೆಯನ್ನೂ ಮಾಡಬಹುದು. ಆದರೆ ಭೂಮಿಯೇ ಹೊತ್ತಿ ಉರಿದರೆ ಯಾರಿಗೂ ನಿಲ್ಲಲು ಸಾಧ್ಯವಿಲ್ಲ. ೨೦೨೩ರಲ್ಲಿ ಜಾಗತಿಕವಾಗಿ ಅಂತಹ ಪ್ರಸಂಗ ಎದುರಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

ಎರಡ್ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ. ಸಾಧು, ಸಂತರಿಗೆ ತೊಂದರೆಯಾಗುವ ಲಕ್ಷಣಗಳಿವೆ. ಈ ಬಾರಿ ಕೋವಿಡ್ ಹಿಂದಿನಂತೆ ದೊಡ್ಡ ಪ್ರಮಾಣದಲ್ಲಿ ಕೆಡಕು ಮಾಡದು. ರಾಜ್ಯ ರಾಜಕೀಯದಲ್ಲಿ ಎಷ್ಟೇ ಗೊಂದಲಗಳಿದ್ದರೂ, ಈ ಬಾರಿ ಸ್ಪಷ್ಟ ಬಹುಮತದಿಂದ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

ಹಿಂದೂ ಸಾಂಪ್ರದಾಯದ ಪ್ರಕಾರ ಯುಗಾದಿ ಫಲ ಹೇಳಲಾಗುತ್ತದೆ. ಮಳೆ, ಬೆಳೆ, ವ್ಯಾಪಾರ, ಜನ ಸಾಮಾನ್ಯರ ಬದುಕು, ಬವಣೆ, ರಾಜಕೀಯ ಸ್ಥಿತಿಗತಿ ತಿಳಿಯುತ್ತದೆ. ಅದರಂತೆ ಸಂಕ್ರಾಂತಿ ಫಲವನ್ನೂ ಹೇಳುವ ರೂಢಿಯಿದೆ. ಅದು ರಾಜ ಮಹಾರಾಜರು, ಶ್ರೀಮಂತರು, ವ್ಯಾಪಾರಸ್ಥರಿಗೆ ಅನ್ವಯವಾಗುತ್ತದೆ. ಸಂಕ್ರಾಂತಿ ಬಳಿಕವೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ ರೆಡ್ಡಿ, ವೈಜಯಂತಿ ರೆಡ್ಡಿ, ರಾಜವರ್ಧನ ರೆಡ್ಡಿ, ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾದ ಬುಕ್ಕಸಾಗರ ಸಂಗಪ್ಪ, ಮೆಟ್ರಿ ಮಲ್ಲಿಕಾರ್ಜುನ್, ಧರ್ಮಸಾಗರ ಪಂಚಪ್ಪ, ಅಜಿಯ್‌ಕುಮಾರ್ ಹಿರೇಮಠ, ವಿಜಯಕುಮಾರ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ವಿಜಯಲಕ್ಷ್ಮೀ ಹಿರೇಮಠ, ಪ್ರತಿಭಾ ಕುದುರೆಮೂತಿ, ಶಕುಂತಲ, ರೇಷ್ಮಿ, ನಗರಸಭೆ ಮಾಜಿ ಸದಸ್ಯ ಚಂದ್ರಕಾಂತ ಕಾಮತ್ ಸೇರಿದಂತೆ ವಿವಿಧ ಮುಖಂಡರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!