ಹೊಸ ದಿಗಂತ ವರದಿ, ಮೈಸೂರು:
ಬಾಲಕಿಯನ್ನು ತನಗೆ ಮದುವೆ ಮಾಡಿಕೊಡಲು ಆಕೆಯ ಪೋಷಕರು ನಿರಾಕರಿಸಿದ ಹಿನ್ನಲೆಯಲ್ಲಿ ಕುಪಿತಗೊಂಡ ಯುವಕನೊಬ್ಬ ಆಕೆಯನ್ನ ಅಪಹರಿಸಿ ಕೊಂಡು ಹೋಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನ ತಾಲೂಕಿನ ಗೋಳೂರು ಗ್ರಾಮದಲ್ಲಿ ನಡೆದಿದೆ.
15 ವರ್ಷದ ಅಪ್ರಾಪ್ತೆಯನ್ನ ಶಶಿ ಎಂಬಾತ ಅಪಹರಿಸಿಕೊಂಡು ಹೋಗಿರುವ ಆರೋಪ ಕೇಳಿಬಂದಿದೆ. 3 ತಿಂಗಳ ಹಿಂದೆ ಅಪ್ರಾಪ್ತೆಯನ್ನ ಮದುವೆ ಮಾಡಿಕೊಡುವಂತೆ ಶಶಿ ಹಾಗೂ ಆತನ ತಂದೆ ಪುಟ್ಟಯ್ಯ ಹಾಗೂ ದೊಡ್ಡಪ್ಪ ಮಹದೇವು ಅಪಹೃತ ಬಾಲಕಿಯ ಪೋಷಕರನ್ನು ಕೇಳಿದ್ದರು. ಆದರೆ, ಬಾಲಕಿಯ ಪೋಷಕರು ಈ ಮದುವೆಗೆ ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಶಶಿಯ ತಂದೆ ಹಾಗೂ ದೊಡ್ಡಪ್ಪ ನಿಮ್ಮ ಮಗಳನ್ನು ಮದುವೆ ಮಾಡಿಕೊಡದಿದ್ದಲ್ಲಿ ಪರಿಣಾಮ ಎದುರಿಸುತ್ತೀರಾ ಎಂದು ಬಾಲಕಿಯ ಪೋಷಕರಿಗೆ ಎಚ್ಚರಿಕೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಫೆಬ್ರವರಿ 17ರಂದು ಅಪ್ರಾಪ್ತೆ ನಾಪತ್ತೆಯಾಗಿದ್ದು, ನಾಲ್ಕು ದಿನಗಳ ಕಾಲ ಹುಡುಕಾಟ ನಡೆಸಿದಾಗ ಅಪ್ರಾಪ್ತೆ ಶಶಿ ಮನೆಯಲ್ಲಿರುವ ಮಾಹಿತಿ ತಿಳಿದು ಬಂದಿದೆ. ಅಪ್ರಾಪ್ತ ಮಗಳನ್ನ ಶಶಿ, ಆತನ ತಂದೆ ಪುಟ್ಟಯ್ಯ ಮತ್ತು ದೊಡ್ಡಪ್ಪ ಮಹದೇವು ಅಪಹರಿಸಿದ್ದಾರೆಂದು ಬಾಲಕಿಯ ತಾಯಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.