ಈ ಜನಸಾಗರ ನೋಡಿದರೆ ಬಿಜೆಪಿ ಸರ್ಕಾರ ಖಚಿತ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತುಮಕೂರಿನಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಜನರನ್ನು ಲೂಟಿ ಮಾಡಿದ ಹಿರಿಮೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಇದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಬಡವರು ಮತ್ತು ಗ್ರಾಮೀಣ ಪ್ರದೇಶಗಳೆರಡೂ ಅಭಿವೃದ್ಧಿಯಾಗುತ್ತಿವೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2.5 ಲಕ್ಷ ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದೇವೆ. ತುಮಕೂರಿನಲ್ಲಿ (Tumkur) 3 ಲಕ್ಷ ರೈತರು ಸುಮಾರು 700 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ಹೇಳಿದರು.

ಬೃಹತ್ ಸಂಖ್ಯೆಯಲ್ಲಿ ಸೇರಿದ ಜನರಿಗೆ ನಮಸ್ಕರಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಠದ ಶ್ರೀಗಳನ್ನು ಸ್ಮರಿಸಿದರು. ಸಾಧುಸಂತರ ಹಾಗೂ ಜನರ ಆಶೀರ್ವಾದದಿಂದ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದರು. ರೋಡ್​ಶೋ ಹಾಗೂ ಸಮಾವೇಶದಲ್ಲಿ ಸೇರಿದ ಜನಸಂಖ್ಯೆ ನೋಡಿದಾಗಲೇ ಬಿಜೆಪಿ ಸರ್ಕಾರ ಖಚಿತ ಎಂಬುದನ್ನು ತೋರಿಸತ್ತದೆ ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ತುಷ್ಟೀಕರಣದ ಗುಲಾಮ ಆಗಿ ಪರಿವರ್ತನೆಗೊಂಡಿದೆ ಎಂದರು. ಕರ್ನಾಟಕವನ್ನು ಜೆಡಿಎಸ್, ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ. ಬಿಜೆಪಿಯಿಂದ ಮಾತ್ರ ಕರ್ನಾಟಕ ಜೊತೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಪವಿತ್ರ ಭೂಮಿ ಸಿದ್ಧಗಂಗಾ ಶ್ರೀಗಳ ಸಾನಿಧ್ಯಕ್ಕೆ ಬಂದಿದ್ದೇನೆ . ಬಿಜೆಪಿ ಅನ್ನ, ಅಕ್ಷರ, ಆದಾಯ ಇತ್ಯಾದಿ 7 ಅಭಿವೃದ್ಧಿಯ ಸಂಕಲ್ಪ ಹೊಂದಿದೆ ಎಂದರು. ತುಮಕೂರಿನಲ್ಲಿ ಅನೇಕ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆ, ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಬಿಜೆಪಿ ಅಭಿವೃದ್ಧಿ ಕಾರ್ಯಗಳಿಗೆ ವೇಗದ ಗತಿ ನೀಡಿದೆ ಎಂದರು.

ದೇಶದಲ್ಲಿ ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ, ಮಹಿಳೆಯರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ಹಲವು ಯೋಜನೆ ತಂದಿದೆ ಎಂದು ಪ್ರಧಾನಿ ಮೋದಿ ತುಮಕೂರಿನಲ್ಲಿ ಹೇಳಿದರು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ವೇಗ ಹೆಚ್ಚಿದೆ ಎಂದು ಹೇಳಿದ ಮೋದಿ, 3 ಕೋಟಿಗೂ ಹೆಚ್ಚು ಮನೆಗಳು ಮಹಿಳೆಯರ ಹೆಸರಿನಲ್ಲಿವೆ. ದೇಶದ 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮೂಲಕ ರಸ್ತೆ ಅಭಿವೃದ್ಧಿ ಮಾಡತ್ತಿದ್ದೇವೆ, ತುಮಕೂರು ಜಿಲ್ಲೆಯ 1.5 ಲಕ್ಷ ಕುಟುಂಬಗಳಿಗೆ ನಲ್ಲಿ ನೀರು ಕಲ್ಪಿಸಿದ್ದೇವೆ ಎಂದರು.

ಕಾಂಗ್ರೆಸ್, ಜೆಡಿಎಸ್ ಕರ್ನಾಟಕದ ಯುವಕರ ಭವಿಷ್ಯಕ್ಕೆ ತಡೆಯೊಡ್ಡುತ್ತಿವೆ. ಕರ್ನಾಟಕದ ಯುವಕರ ಭವಿಷ್ಯದ ಬಗ್ಗೆ ಅವರಿಗೆ ದೂರದೃಷ್ಟಿ ಇಲ್ಲ. ಕಾಂಗ್ರೆಸ್ 85% ಕಮಿಷನ್ ಪಡೆದು ದೇಶವನ್ನು ಹಾಳು ಮಾಡಿದೆ ಎಂದು ಟೀಕಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!