spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನ್ಯಾನೊ ಯೂರಿಯಾ: ಸಿಂಪಲ್ಲಾಗೊಂದು ಗೊಬ್ಬರದ ಸ್ಟೋರಿ!

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………….

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಿಡ್ರೀ, ಗೊಬ್ಬರದ ಕತೆ ಅಂತಾದ್ರೆ ರೈತರು, ಕೃಷಿಯಲ್ಲಿ ಆಸಕ್ತಿ ಇರುವವರು ಓದಿಕೊಳ್ಳಲಿ ಅಂದುಕೊಳ್ಳಬೇಡಿ. ಏಕೆಂದರೆ ದೇಶದ ಖಜಾನೆಯಲ್ಲಿ ಬಹುದೊಡ್ಡಮಟ್ಟದ ಹಣ ರಸಗೊಬ್ಬರಗಳ ಮೇಲಿನ ಸಬ್ಸಿಡಿಗೆ ವ್ಯಯವಾಗುತ್ತದೆ. ಈಗ ಹೇಳಹೊರಟಿರುವುದು ಅಂಥದೊಂದು ಭಾರವನ್ನು ತಗ್ಗಿಸಲಿರುವ, ಕೃಷಿ ಕ್ಷೇತ್ರದ ಯೂರಿಯಾ ರಸಗೊಬ್ಬರ ಬಳಕೆಯ ವಿಧಾನವನ್ನೇ ಕ್ರಾಂತಿಕಾರಕ ಬದಲಾವಣೆಗೆ ಒಳಪಡಿಸಲಿರುವ ಅನ್ವೇಷಣೆಯೊಂದರ ಬಗ್ಗೆ. 

ಸಹಕಾರಿ ಸಂಸ್ಥೆ ಇಫ್ಕೊ ತಾನು ದ್ರವೀಕೃತ ನ್ಯಾನೋ ಯೂರಿಯಾ ಉತ್ಪಾದನೆಗೆ ಮುಂದಾಗಿರುವುದಾಗಿ ಜೂನ್ ನಲ್ಲಿ ಘೋಷಿಸಿತ್ತು. ಇದಕ್ಕೂ ಮೊದಲು ನ್ಯಾನೋ ಯೂರಿಯಾವನ್ನು ಪ್ರಯೋಗಾರ್ಥವಾಗಿ ರೈತರ ಹೊಲಗಳಲ್ಲಿ ಪ್ರಯೋಗಿಸಿ ಎಲ್ಲ ಅಗತ್ಯ ಒಪ್ಪಿಗೆಗಳನ್ನು ಪಡೆಯಲಾಗಿತ್ತು ಹಾಗೂ ಇದರ ಪರಿಣಾಮಕತ್ವವನ್ನು ಖಾತ್ರಿ ಪಡಿಸಿಕೊಳ್ಳಲಾಗಿತ್ತು. ಈ ಬಗೆಯ ದ್ರವೀಕೃತ ನ್ಯಾನೊ ಯೂರಿಯಾ ತಯಾರಿಸಿರುವುದು ಜಗತ್ತಿನಲ್ಲೇ ಮೊದಲು ಅಂತ ಇಫ್ಕೋ ಹೇಳಿಕೊಂಡಿದೆ.

ಕೆಲದಿನಗಳ ಹಿಂದಾದ ಬೆಳವಣಿಗೆಯಲ್ಲಿ, ಸರ್ಕಾರಿ ಸ್ವಾಮ್ಯದ ಎರಡು ರಸಗೊಬ್ಬರ ಕಂಪನಿಗಳಾದ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ಮತ್ತು ರಾಷ್ಟ್ರೀಯ ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ ಲಿಮಿಟೆಡ್ ಇವು ಇಫ್ಕೊದೊಂದಿಗೆ ಒಪ್ಪಂದ ಮಾಡಿಕೊಂಡು ನ್ಯಾನೊ ಯೂರಿಯಾವನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದಕ್ಕೆ ಮುಂದಾಗಿವೆ. ರಾಸಾಯನಿಕ ಮತ್ತು ರಸಗೊಬ್ಬರ ಖಾತೆಗಳ ಸಚಿವ ಮನ್ಸುಖ್ ಮಾಂಡವೀಯಾ ಸಮ್ಮುಖದಲ್ಲಿ ಆದ ಒಪ್ಪಂದವಿದು. ಹೀಗಾಗಿ ಮುಂದಿನ ದಿನಗಳಲ್ಲಿ ದೇಶವು ಬಹುದೊಡ್ಡ ಮಟ್ಟದಲ್ಲಿ ದ್ರವೀಕೃತ ನ್ಯಾನೊ ಯೂರಿಯಾ ಬಳಕೆಗೆ ತೆರೆದುಕೊಳ್ಳಲಿದೆ ಎಂಬುದು ಸ್ಪಷ್ಟವಾಗಿದೆ. 

 

ನ್ಯಾನೊ ಯೂರಿಯಾ ಯಾವ ಬದಲಾವಣೆ ತರಲಿದೆ?

ಬೆಳೆಗೆ ಅಗತ್ಯವಾದ ಸಾರಜನಕವನ್ನು ಪೂರೈಸುವುದಕ್ಕೆ ರೈತರು ಬಳಸುವ ಯೂರಿಯಾ ಈಗ ಕಣಗಳ ರೂಪದಲ್ಲಿದೆ. ಇವನ್ನು ಚೀಲಗಳಲ್ಲಿ ತುಂಬಿ ಮಾರಾಟ ಮಾಡುವಾಗ ಅದಕ್ಕೆ ಬೇಕಾದ ಲಾಜಿಸ್ಟಿಕ್ಸ್, ಜಾಗ, ಪ್ರಮಾಣ ಎಲ್ಲವೂ ದೊಡ್ಡದು. ಈ ಭಾರವನ್ನು ದ್ರವೀಕೃತ ನ್ಯಾನೊ ಯೂರಿಯಾ ಗಣನೀಯವಾಗಿ ತಗ್ಗಿಸಲಿದೆ. 45 ಕೆಜಿ ತೂಕದ ಒಂದು ಚೀಲವನ್ನು ಬಳಸುವ ಜಾಗದಲ್ಲಿ ಕೇವಲ 500 ಎಂಎಲ್ ನ್ಯಾನೊ ಯೂರಿಯಾದ ಬಾಟಲಿ ಬಳಸಿದರೆ ಸಾಕು. 2023ರ ವೇಳೆಗೆ ಈ ದ್ರವೀಕೃತ ನ್ಯಾನೊ ಯೂರಿಯಾ, ಈಗ ಬಳಕೆಯಲ್ಲಿರುವ ಯೂರಿಯಾದಲ್ಲಿ 1 ಕೋಟಿ ಲಕ್ಷ ಟನ್ನಿಗೂ ಹೆಚ್ಚಿನ ಪ್ರಮಾಣವನ್ನು ಇಲ್ಲವಾಗಿಸಲಿದೆ ಎಂಬುದೊಂದು ಅಂದಾಜು. 

ಜಾಗ ಮತ್ತು ಲಾಜಿಸ್ಟಿಕ್ಸ್ ಇವಷ್ಟೇ ಸರಳವಾಗುತ್ತಿರುವುದಲ್ಲ, ನ್ಯಾನೊ ಯೂರಿಯಾದ ಬೆಲೆ ಕೂಡ ರೈತರಿಗೆ ಈಗಿನ ಯೂರಿಯಾ ಬಳಕೆಗಿಂತ ಕಡಿಮೆ ಬೀಳಲಿದೆ. 

ಈಗಿನ ಯೂರಿಯಾ ಬಳಕೆಯಲ್ಲಿರುವ ಇನ್ನೊಂದು ಸಮಸ್ಯೆ ಎಂದರೆ ಇದರ ಅಸಮರ್ಪಕ ಅತಿ ಬಳಕೆ. ಈಗ ಬಳಕೆಯಲ್ಲಿರುವುದರ ಹೆಚ್ಚಿನ ಪ್ರಮಾಣ ಪೈರಿಗೆ ಹೋಗದೇ ಮಣ್ಣು ಮತ್ತು ನೀರನ್ನು ಕಲುಷಿತಗೊಳಿಸುವುದರಲ್ಲಿ ಕೊಡುಗೆ ಕೊಡುತ್ತಿದೆ. ಆದರೆ ದ್ರವೀಕೃತ ನ್ಯಾನೊ ಯೂರಿಯಾದ ಬಳಕೆ ಸಿಂಪಡನೆ ಮೂಲಕ ನೇರವಾಗಿ ಪೈರಿನ ಎಲೆಗಳ ಮೇಲೆ. ಅದು ಅಲ್ಲಿಂದಲೇ ಸಾರಜನಕವನ್ನು ಹೀರಿಕೊಂಡು ಸಸ್ಯದ ಬೆಳವಣಿಗೆ ಆಗುತ್ತದೆ ಎಂಬುದು ಇಫ್ಕೊ ನೀಡಿರುವ ವಿವರಣೆ.

ಈ ನ್ಯಾನೊ ಯೂರಿಯಾವನ್ನು ಹಲವು ಕೃಷಿ ವಿಕ್ಷಾನ ಸಂಸ್ಥೆಗಳಲ್ಲಿ ಪರೀಕ್ಷೆಗೊಳಪಡಿಸಿದ ನಂತರ ಉತ್ಪಾದನೆಗೆ ಸಜ್ಜುಗೊಳಿಸಲಾಗಿದೆ. ನ್ಯಾಷನಲ್ ಅಗ್ರಿಕಲ್ಚರ್ ರೀಸರ್ಚ್ ಸಿಸ್ಟಂ, ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್, ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಪ್ರಯೋಗಕ್ಕೆ ಒಳಗಾಗಿದೆ. 11,000 ಕೃಷಿಕರ ನಡುವೆ 94 ವಿಧದ ಪೈರುಗಳ ಮೇಲೆ ಯಶಸ್ವೀ ಪ್ರಯೋಗ ನಡೆದಿದೆ ಎಂದು ಇಫ್ಕೊ ಹೇಳಿಕೊಂಡಿದೆ. ಬೆಳೆಯಲ್ಲೂ ಸರಾಸರಿ ಶೇ.8ರಷ್ಟು ಹೆಚ್ಚಳ ಕಂಡುಬಿಂದಿದೆ ಎಂಬುದು ಸಂಸ್ಥೆ ನೀಡಿರುವ ಮಾಹಿತಿ.

ಈ ಹಿಂದೆ ರಸಗೊಬ್ಬರ ಕಂಪನಿಗಳಿಗೆ ಯೂರಿಯಾಕ್ಕೆ ಬೇವು ಲೇಪಿಸುವುದನ್ನು ಕಡ್ಡಾಯ ಮಾಡಿ, ರಸಗೊಬ್ಬರದಲ್ಲಿರುವ ರಾಸಾಯನಿಕಗಳು ಬೇರೆ ಬಳಕೆಗಳಿಗೆ ಹೋಗುವುದನ್ನು ಮೋದಿ ಸರ್ಕಾರ ತಡೆದಿತ್ತು. ಇದೀಗ ನ್ಯಾನೊ ಯೂರಿಯಾ ಪ್ರಯೋಗದ ಹಿಂದೆಯೂ ಸರ್ಕಾರ ಪ್ರೋತ್ಸಾಹಕಾರಿಯಾಗಿ ನಿಂತಿದ್ದು, ಕೃಷಿಕ್ಷೇತ್ರದಲ್ಲಿ ದೊಡ್ಡಮಟ್ಟದ ಬದಲಾವಣೆ ನಿರೀಕ್ಷಿಸಲಾಗಿದೆ. 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss