ಅಕ್ರಮ ಬೀಟೆ ನಾಟಾ ಸಾಗಾಟ : ಮಾಲು ವಶ-ಆರೋಪಿಗಳು ಪರಾರಿ

ಹೊಸದಿಗಂತ ವರದಿ, ಕುಶಾಲನಗರ:
ಶುಂಠಿ ಸಾಗಿಸುವ ನೆಪದಲ್ಲಿ ಅಕ್ರಮವಾಗಿ ಬೀಟಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು 14 ಲಕ್ಷ ರೂ. ಮೌಲ್ಯದ ವಾಹನ ಹಾಗೂ ಹಾಗೂ ಎರಡು ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಕರಿಕೆಯಿಂದ ಹಾಸನ ಜಿಲ್ಲೆಯ ಕಡೆಗೆ ಹೋಗುತ್ತಿದ್ದ ಟಾಟಾ ಏಸ್ ವಾಹನ (ಕೆಎಲ್ 79, ಎ 2834)ವನ್ನು ಕೊಡಗಿನ ಗಡಿ, ಶಿರಂಗಾಲ ಅರಣ್ಯ ತಪಾಸಣೆ ಗೇಟ್’ನಲ್ಲಿ ತಡೆದು ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಅದರಲ್ಲಿ ಶುಂಠಿ ಸಾಗಿಸುತ್ತಿದ್ದುದು ಪತ್ತೆಯಾಗಿದೆ.
ಆದರೆ ಕೊಳೆತ ಶುಂಠಿಯನ್ನು ನೋಡಿ ಅನುಮಾನಗೊಂಡ ಅರಣ್ಯ ಸಿಬ್ಬಂದಿಗಳು ವಾಹನವನ್ನು ಹತ್ತಿ ಶುಂಠಿ ಚೀಲಗಳನ್ನು ತೆರವುಗೊಳಿಸಿದಾಗ ಬೀಟೆ ನಾಟಾ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.‌
ಈ ಸಂದರ್ಭ ವಾಹನ ಚಾಲಕ ಕರಿಕೆಯ ಎಳ್ಳುಕೊಚ್ಚಿಯ ಕೆ.ಉಮ್ಮರ್ ಅವರ ಪುತ್ರ ಕೆ.ಯು.ಅಸ್ಗರ್ ಹಾಗೂ ಕ್ಲೀನರ್ ಕರಿಕೆಯ ಹರೀಶ್ ಅವರುಗಳು ವಾಹನವನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ.
ವಲಯ ಅರಣ್ಯಾಧಿಕಾರಿ ಚೇತನ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಎಂ.ಕೆ.ಭರತ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆಸ್ಗರ್ ಹಾಗೂ ಹರೀಶ್ ವಿರುದ್ಧ ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಆರ್’ಎಫ್ ಸುರೇಶ್, ಅರಣ್ಯ ಸಿಬ್ಬಂದಿಗಳಾದ ಭೀಮಣ್ಣ ಗೌಡ, ಲೋಕೇಶ್, ಡಿಲಕ್ಸ್, ಆರ್.ಆರ್.ಟಿ.ಯ ವರುಣ್ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!