ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಅಕ್ರಮ ಗೋಸಾಗಾಣಿಕೆ ತಡೆಯಲು ಆಯಕಟ್ಟಿನ ಜಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಬೇಕೆಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಯುವ ಮೊರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರವಿನಗಂಡಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು ಹಬ್ಬದ ನೆಪವೊಡ್ಡಿ ಅಕ್ರಮವಾಗಿ ಗೋವುಗಳನ್ನು ಕದ್ದು ಸಾಗಾಣಿಕೆ ಮಾಡಲಾಗುತ್ತಿದೆ ಎಂದು ದೂರಿದರು.
ಅಕ್ರಮ ಗೋಸಾಗಾಣಿಕೆ, ಗೋಹತ್ಯೆ ಸಾರ್ವಜನಿಕವಾಗಿ ಗೋಮಾಂಸ ಮಾರಾಟ ಮಾಡುವುದರ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ 2020 ಅಡಿ ಕ್ರಮ ಜರುಗಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.
ಹೊಸ ಕಾಯ್ದೆಯಂತೆ ರಾಜ್ಯದಲ್ಲಿ ಗೋವಂಶದ ಕುರ್ಬಾನಿ ನಿಷೇಧ, ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ವಿಧೇಯಕ 2020 ರಾಜ್ಯದಲ್ಲಿ ಜಾರಿಯಲ್ಲಿದ್ದು ರಾಜ್ಯಾದ್ಯಂತ ದನ, ಕರು, ಹೋರಿ, ಎಮ್ಮೆ, ಕೋಣಗಳ ವಧೆ, ಕುರ್ಬಾನಿ ನಿಷೇಧಿಸಿದೆ. ಈ ಕಾಯ್ದೆಯ ಸೆಕ್ಷನ್ 12 ರಂತೆ ಗೋವಂಶ ವಧೆಗೆ ಕನಿಷ್ಠ 3 ವರ್ಷದಿಂದ 7 ವರ್ಷದ ವರೆಗೆ ಜೈಲುವಾಸ ಶಿಕ್ಷೆ ಹಾಗು 1 ಲಕ್ಷ ರೂಪಾಯಿಗಳಿಂದ ಗರಿಷ್ಠ 5 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ ಎಂದು ವವರಿಸಿದರು.
ಸೆಕ್ಷನ್ 14 ರಂತೆ ವಧೆ, ಕುರ್ಬಾನಿ ಮಾಡಿದ ಸ್ಥಳಗಳನ್ನು, ಕಟ್ಟಡ, ಮನೆ ಖಾಸಗಿ ಸ್ಥಳ, ತೋಟ ಇತ್ಯಾದಿ ಶಾಶ್ವತವಾಗಿ ಮುಟ್ಟುಗೋಲು ಹಾಕಬಹುದಾಗಿದೆ.
ರಾಜ್ಯಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಸಹ ಸಾರ್ವಜನಿಕವಾಗಿ ಗೋಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವುದು ನಡೆಯುತ್ತಿದೆ. ಈಗ ಕುರುಬಾನಿ ಎಂದು ಗೋವುಗಳನ್ನ ಹತ್ಯೆ ಮಾಡುವ ಗೋಹಂತಕರಿಗೆ ಹೊಸ ಕಾನೂನು ಜಾರಿ ಮಾಡಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಲಾಯಿತು.
ಕಾನೂನು ಉಲ್ಲಂಘನೆ ಮಾಡುವ ಗೋಕಸಾಯಿಗಳು ಯಾರದ್ದೇ ಆದರೂ ಅವರ ಮೇಲೆ ಕಠಿಣ ಕ್ರಮ ಎಂಬುದನ್ನ ಅರಿವು ಮೂಡಿಸಬೇಕು.
ತಕ್ಷಣ ಜಾರಿಗೆ ಬರುವಂತೆ ಅಕ್ರಮ ಕಸಾಯಿಖಾನೆ ಹಾಗು ಅಕ್ರಮ ಗೋಸಾಗಾಣಿಕೆ ಸಂಪೂರ್ಣ ಬಂದ್ ಮಾಡಿಸಬೇಕು. ಅಕ್ರಮ ಎಸಗುವವರ ವಿರುದ್ಧ ಹೊಸ ಗೋಹತ್ಯೆ ನಿಷೇಧ ಕಾಯ್ದೆ 2020 ಅಡಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು ಒತ್ತಾಯಿಸಲಾಗಿದೆ.
ಭಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಉಪಾಧ್ಯಕ್ಷ ಜೀವನ್ ಕೋಟೆ, ಸಚಿನ್, ಕಾರ್ಯದರ್ಶಿ ಕೌಶಿಕ್, ಖಜಾಂಚಿÀ ಕಾಂಚನ್, ನಗರ ಯುವ ಮೋರ್ಚಾದ ಪ್ರಶಾಂತ್, ಗೌತಮ್ ಉಪಸ್ಥಿತರಿದ್ದರು.