ಅಕ್ರಮ ಮತಾಂತರ ಕೊಲೆ, ಡಕಾಯಿತಿ, ಅತ್ಯಾಚಾರದಂತಹ ಗಂಭೀರ ಅಪರಾಧವಲ್ಲ: ಸುಪ್ರೀಂಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳಿಸುವುದು ಕೊಲೆ, ಡಕಾಯಿತಿ ಅಥವಾ ಅತ್ಯಾಚಾರದಂತಹ ಗಂಭೀರ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಜೊತೆಗೆ ಬುದ್ಧಿಮಾಂದ್ಯ ಬಾಲಕನನ್ನು ಇಸ್ಲಾಂಗೆ ಮತಾಂತರಿಸಿದ ಆರೋಪ ಹೊತ್ತಿದ್ದ ಮೌಲ್ವಿಗೆ ಜಾಮೀನು ನೀಡಿದೆ.

ವಿಚಾರಣಾ ನ್ಯಾಯಾಧೀಶರಿಗೆ ಸಿಆರ್‌ಪಿಸಿ ಸೆಕ್ಷನ್ 439 ಅಥವಾ ಬಿಎನ್‌ಎಸ್‌ಎಸ್ ಸೆಕ್ಷನ್ 483ರ ವ್ಯಾಪ್ತಿ ತಿಳಿಯದ ಕಾರಣಕ್ಕೆ ಜಾಮೀನು ಅರ್ಜಿ ಪರಿಗಣಿಸುವಾಗ ತಮ್ಮ ವಿವೇಚನೆಯನ್ನು ಹೇಗೆ ಚಲಾಯಿಸಬೇಕು ಎಂಬುದನ್ನು ವಿಚಾರಣಾ ನ್ಯಾಯಾಧೀಶರು ಅರ್ಥಮಾಡಿಕೊಳ್ಳುವುದಕ್ಕಾಗಿ ಪ್ರತಿ ವರ್ಷ ಹಲವು ಸಮ್ಮೇಳನಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ ಎಂದು ಎಂದು ನ್ಯಾ. ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರಿದ್ದ ಪೀಠ ಹೇಳಿದೆ.

ಜಾಮೀನು ನಿರಾಕರಿಸಿದ್ದಕ್ಕಾಗಿ ಅಲಾಹಾಬಾದ್‌ ಹೈಕೋರ್ಟ್‌ ಅನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಅರ್ಜಿದಾರರಿಗೆ ಜಾಮೀನು ನೀಡುವ ಮೂಲಕ ಹೈಕೋರ್ಟ್ ತನ್ನ ವಿವೇಚನೆಯನ್ನು ಚಲಾಯಿಸಬೇಕಿತ್ತು, ಜಾಮೀನು ನಿರಾಕರಿಸಲು ಹೈಕೋರ್ಟ್‌ಗೆ ಯಾವುದೇ ಸಕಾರಣವಿಲ್ಲ. ಇಲ್ಲಿ ಆರೋಪಿಸಿರುವ ಕೃತ್ಯ ಕೊಲೆ, ಡಕಾಯಿತಿ, ಅತ್ಯಾಚಾರ ಇತ್ಯಾದಿಗಳಂತಹ ಗಂಭೀರ ಅಪರಾಧವಲ್ಲ. ವಿಚಾರಣಾ ನ್ಯಾಯಾಲಯ ಜಾಮೀನು ನೀಡುವ ಧೈರ್ಯವನ್ನು ಅಪರೂಪವಾಗಿ ಒಗ್ಗೂಡಿಸಿಕೊಳ್ಳುತ್ತದೆ ಎಂದು ನಾವು ಅರ್ಥಮಾಡಿಕೊಳ್ಳಬಹುದಾದರೂ ಅಂತಹ ಧೈರ್ಯವನ್ನು ಹೈಕೋರ್ಟ್‌ ತೋರಬೇಕಿತ್ತು ಎಂಬ ನಿರೀಕ್ಷೆ ಇದೆ ಎಂದು ನ್ಯಾಯಾಲಯ ವಿವರಿಸಿದೆ.

ಐಪಿಸಿ ಸೆಕ್ಷನ್ 504 (ಶಾಂತಿ ಭಂಗ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್‌ ಬೆದರಿಕೆ) ಹಾಗೂ ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯಿದೆಯ ಸೆಕ್ಷನ್ 3 ಮತ್ತು 5ರ ಅಡಿಯಲ್ಲಿ ಮೌಲ್ವಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ವಾಸ್ತವವಾಗಿ ಇಂತಹ ಪ್ರಕರಣ ಸುಪ್ರೀಂಕೋರ್ಟ್‌ ಬಳಿ ಬರಬಾರದು. ವಿಚಾರಣಾ ನ್ಯಾಯಾಲಯ ತನ್ನ ವಿವೇಚನೆ ಚಲಾಯಿಸಲು ಮತ್ತು ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಕಷ್ಟು ಧೈರ್ಯ ತೋರಬೇಕಿತ್ತು. ಸೂಕ್ತವಾದ ನಿಯಮ ಮತ್ತು ಷರತ್ತುಗಳನ್ನು ವಿಧಿಸಿ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕಿತ್ತು. ಹೈಕೋರ್ಟ್‌ಗಳಲ್ಲದೆ ಇದೀಗ ದುರದೃಷ್ಟವಶಾತ್ ದೇಶದ ಸುಪ್ರೀಂಕೋರ್ಟ್‌ ಕೂಡ ಜಾಮೀನು ಅರ್ಜಿಗಳಿಂದ ಮುಳುಗಿ ಹೋಗಿರುವುದಕ್ಕೆ ಇದೂ ಒಂದು ಕಾರಣ ಎಂದ ಪೀಠ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿತು.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!