ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ತುಮಕೂರು ಜಿಲ್ಲಾ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಬ್ಬಿ ತಾಲೂಕಿನ ತಿಪ್ಪೂರಿನ ಟಿ.ಆರ್.ಮಧುಚಂದ್ರ (29), ಎಸ್.ಶಿವಕುಮಾರ್ (24), ಉದ್ದೆ ಹೊಸಕೆರೆಯ ಮಂಜುನಾಥ್ (39), ಹಂದನಕೆರೆಯ ತಿಮ್ಮರಾಜು (45) ಮತ್ತು ರವೀಶ್ (50), ತುಮಕೂರು ಪಟ್ಟಣದ ಇಮ್ರಾನ್ ಪಾಷಾ (40) ಬಂಧಿತ ಆರೋಪಿಗಳು.
ಆಗಸ್ಟ್ 12ರಂದು ಗುಬ್ಬಿ ತಾಲೂಕಿನ ತಿಪೂರು ಗ್ರಾಮದ ಆರೋಪಿ ಮಧುಚಂದ್ರ ಎಂಬಾತ ಅಕ್ರಮವಾಗಿ ಯಾವುದೇ ಲೈಸೆನ್ಸ್ ಇಲ್ಲದೆ ನಾಡ ಬಂದೂಕಿನೊಂದಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದನು. ಇದನ್ನು ಆಕ್ಷೇಪಿಸಿದ ದರ್ಶನ್ ಎಂಬುವರ ಜೊತೆ ಮಾತಿಗೆ ಮಾತು ಬೆಳೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಂದೂಕು ಕೆಳಗೆ ಬಿದ್ದು ಸ್ಥಳದಲ್ಲಿಯೇ ಇದ್ದ ಚೈತ್ರ ಎಂಬುವರಿಗೆ ಗಾಯವಾಗಿತ್ತು. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಆರೋಪಿ ಹೊಂದಿದ್ದ ಲೈಸೆನ್ಸ್ ಇಲ್ಲದ ಬಂದೂಕಿನ ಬಗ್ಗೆ ತನಿಖೆ ನಡೆಸಿದಾಗ ಜಿಲ್ಲೆಯಲ್ಲಿ ನಾಡ ಬಂದೂಕುಗಳನ್ನು ತಯಾರಿಸಿ 25,000 ರಿಂದ 30,000 ರೂ. ಗಳಿಗೆ ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ. ಬಂಧಿತ ಆರು ಮಂದಿ ಆರೋಪಿಗಳಿಂದ ಒಟ್ಟು ನಾಲ್ಕು ಬಂದೂಕುಗಳನ್ನು, ಬಿಡಿ ಭಾಗಗಳನ್ನು ಹಾಗೂ ಇದಕ್ಕೆ ತಯಾರಿಸಲು ಬಳಸಲಾಗಿದ್ದ ಕಚ್ಚಾ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.