ಹೊಸದಿಗಂತ ವರದಿ, ಭಟ್ಕಳ:
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಆಹಾರ ನಿರೀಕ್ಷಕರು ವಾಹನ ಸಮೇತ ಅಕ್ಕಿಯನ್ನು ವಶಪಡಿಸಿಕೊಂಡು ವ್ಯಕ್ತಿಯೊಬ್ಬನ ಮೇಲೆ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ತಾಲೂಕಿನ ಪುರವರ್ಗದ ಗಣೇಶ ನಗರ ನಿವಾಸಿ ನಜೀರ ಅಹ್ಮದ್ ಯೂಸುಫ್ ಶೇಖ ಎಂಬಾತ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಿದ ಆರೋಪಿತನಾಗಿದ್ದಾನೆ. ಗುಜರಿ ವ್ಯಾಪಾರಿಯಾಗಿರುವ ಈತ ಪಡಿತರ ಅಕ್ಕಿ ಇರುವ ಮೂಟೆಗಳನ್ನು ಅಕ್ರಮವಾಗಿ ಓಮಿನಿ ವಾಹನದಲ್ಲಿ ಮುಖ್ಯರಸ್ತೆಯ ಮಾರ್ಗವಾಗಿ ಹೂವಿನ ಪೇಟೆ ಕಡೆ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ವಾಹನದಲ್ಲಿ ಸುಮಾರು ೧೭,೬೮೦ ರೂ. ಮೌಲ್ಯದ ೫೨೦ ಕೆ.ಜಿ. ತೂಕದ ಅಕ್ಕಿ ಇರುವ ೧೫ ಮೂಟೆಗಳು ಪತ್ತೆಯಾಗಿವೆ. ಈ ಕುರಿತು ಆಹಾರ ನಿರೀಕ್ಷಕ ಶಶಿಧರ ಭೀಮಣ್ಣ ಹೊನ್ನಳ್ಳಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.