ಹೊಸದಿಗಂತ ವರದಿ, ಬೀದರ್:
ನಗರದ ಕಸಾಯಿಖಾನೆಗೆ ರವಾನಿಸಲು ತಂದಿದ್ದ ಅಪರೂಪದ ತಳಿಯಿಂದ ಕೂಡಿದ 16 ಗೋವುಗಳನ್ನು ಸಂರಕ್ಷಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಬೀದರಿನ ಜ್ಞಾನ ಶಿವಯೋಗಾಶ್ರಮದ ಡಾ. ರಾಜೇಶಖರ ಶಿವಾಚಾರ್ಯರು ಬೇಮಳಖೇಡ ಅವರು ಬಣ್ಣಿಸಿದರು.
ನಗರದ ಚೌಬಾರ ಪರಿಸರದಲ್ಲಿ ಕಡಿಯಲು ತಂದಿದ್ದ 16 ಗೋವುಗಳನ್ನು ಚೌಬಾರ ಪೊಲೀಸ್ ಠಾಣೆಯ ಸಿ.ಪಿ.ಐ. ಪಾಲಾಕ್ಷ ಹಿರೇಮಠ ಹಾಗೂ ಪಿ.ಎಸ್.ಐ. ಪ್ರಭಾಕರ ಪಾಟೀಲ್ ನೇತೃತ್ತದಲ್ಲಿ ಮತ್ತು ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಕಳ್ಳರಿಂದ ಬಚ್ಚಿಟ್ಟಿದ್ದ ಗೋವುಗಳ ಸುರಕ್ಷಿತವಾಗಿ ಬಿಡಿಸಿಕೊಂಡಿರುವುದು ಹೆಮ್ಮೆಪಡುವ ಸಂಗತಿಯಾಗಿದೆ.
ಅಧಿಕಾರಿಗಳು ಸಂರಕ್ಷಿತ 16 ಗೊವುಗಳನ್ನು ಮಧ್ಯರಾತ್ರಿಯಲ್ಲಿಯೇ ನೌಬಾದ ಹತ್ತಿರದ ಭಾಲ್ಕಿ ರಸ್ತೆಯಲ್ಲಿರುವ ಜ್ಞಾನ ಶಿವಯೋಗಾಶ್ರಮದಲ್ಲಿ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ನಿಂದ ಸಂಚಾಲಿತ ಶ್ರೀ ಮಾತೇಶ್ವರಿ ಗೋಶಾಲೆಯಲ್ಲಿ ಸಂರಕ್ಷಣೆಗಾಗಿ ಗೋವುಗಳನ್ನು ತಂದು ಬಿಟ್ಟಿದ್ದಾರೆ.
ಸತತವಾಗಿ ಸುರಿಯುತ್ತಿರುವ ಮಳೆ-ಕೆಸರನ್ನು ಲೆಕ್ಕಿಸದೇ ತುಂಬಿ ತಂದಿದ್ದ ಲಾರಿಗಳಿಂದ ಎರಡೂ ಇಲಾಖೆಯ ಅಧಿಕಾರಿಗಳು ಆ ಎಲ್ಲ ಗೋವುಗಳನ್ನು ಕೆಳಗಿಳಿಸಿದರು. ಲಾರಿಯಿಂದ ಇಳಿಸುವಾಗ ಒಂದು ಗೋವಿನ ಮುಂಭಾಗದ ಬಲಗಾಲು ಬಾಗಿಲಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಅದು ಮುರಿದು ಹೋಯಿತು. ಅಂತಹ ಮಳೆಯಲ್ಲಿಯೇ ಅದಕ್ಕೆ ವೈದ್ಯರು ಪ್ರಥಮ ಚಿಕಿತ್ಸೆಯನ್ನು ನೀಡಿದರು. ಪಶು ವೈದ್ಯರ, ಪೋಲಿಸರ ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಎಲ್ಲರೂ ಶ್ಲಾಘಿಸಿದರು.
ಯಶಸ್ವಿ ಶಸ್ತ್ರ ಚಿಕಿತ್ಸೆ
ರಾತ್ರಿ ಕಾಲು ಮುರಿದುಕೊಂಡಿದ್ದ ಆ ಗೋವಿಗೆ ಜಿಲ್ಲಾ ಪಶು ವೈದ್ಯಕೀಯ ಆಸ್ಪತ್ರೆಯಿಂದ ತಜ್ಞ ಅನುಭವಿ ವೈದ್ಯರಾದ ಡಾ. ನೀಲಕಂಠ ಚನ್ನಶೆಟ್ಟಿ ನೇತೃತ್ವದಲ್ಲಿ ತುಂಬ ಶ್ರಮ ಮತ್ತು ಕಾಳಜೀವಹಿಸಿ ಆ ಗೋವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ವೈದ್ಯರ ಕಾಳಜಿ ಮೆಚ್ಚುವಂತದ್ದು.
ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಸಹ ಜನ ಮೆಚ್ಚುವಂತಹ ರೀತಿಯಲ್ಲಿ ಗೋವುಗಳನ್ನು ನೋಡಿಕೊಂಡರು. ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸಂಗಮೇಶ ಬಿರಾದಾರ ಅವರ ಫಲಾಪೇಕ್ಷೆ ಇಲ್ಲದ ಗೋಸೇವೆ ಅಪೂರ್ವವಾದದ್ದು ಎಂದರು. ಈ ಸಂದರ್ಭದಲ್ಲಿ ಸಿಪಿಐ ಪಾಲಾಕ್ಷ ಹಿರೇಮಠ, ಪಿ.ಎಸ್.ಐ. ಪ್ರಭಾಕರ ಪಾಟೀಲ್, ಪಶುವೈದ್ಯರಾದ ಡಾ. ಸಂಗಮೇಶ ಹುಮನಾಬಾದ, ಡಾ. ನೀಲಕಂಠ ಚನ್ನಶೆಟ್ಟಿ, ಆರಕ್ಷಕ ಬಂಧುಗಳಾದ ವಿಜಯಕುಮಾರ ಭೋಸ್ಲೆ, ರಾಜಕುಮಾರ ದಾನಾ, ಐವನ್, ಪಾಂಡುರಂಗ ಪಾಂಚಾಳ ಪರಿಚಾರಕ ತೇಜರಾವ ಮತ್ತಿತರರು ಉಪಸ್ಥಿತರಿದ್ದರು. ಪಂಚರಾದ ನಾಗೇಶ ದೊಡ್ಡೆ, ಆಕಾಶ ನಾವದಗೆರೆ ಇದ್ದರು.