ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………
ದಿಗಂತ ವರದಿ ಮೈಸೂರು:
ಚಾಮರಾಜನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಮಂದಿ ಅಮಾಯಕರ ಸಾವಿಗೀಡಾಲು ಕಾರಣರಾದ ಡ್ರಗ್ ಕಂಟ್ರೋಲರ್, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳನ್ನು ಸರ್ಕಾರ ಕೂಡಲೇ ಅಮಾನತು ಮಾಡಬೇಕು ಎಂದು ಮೈಸೂರು ಜಿಲ್ಲೆಯ ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆಗ್ರಹಿಸಿದರು.
ಮಂಗಳವಾರ ಮೈಸೂರಿನಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೇವಲ ಮೂವರು ಸೋಂಕಿತರು ಮಾತ್ರ ಮೃತಪಟ್ಟಿದ್ದಾರೆಂದು ಆರೋಗ್ಯ ಸಚಿವರು ಹೇಳುತ್ತಾರೆ. ಹಾಗಾದರೆ, ಅದು ಸಾವಲ್ಲವೇ, ಇಷ್ಟೆಲ್ಲ ದುರಂತದ ನಡುವೆಯೂ ಅಲ್ಲಿನ ಜಿಲ್ಲಾಧಿಕಾರಿಯನ್ನು ಯಾರ ಒತ್ತಡಕ್ಕೆ ಮಣಿದು ಇನ್ನೂ ಇಲ್ಲೇ ಉಳಿಸಿಕೊಂಡಿದ್ದೀರೋ ಗೊತ್ತಿಲ್ಲ. ತಕ್ಷಣ ಅವರನ್ನು ಅಮಾನತು ಮಾಡದೇ ಏನು ತನಿಖೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಮಂಡ್ಯ, ಚಾಮರಾಜನಗರಕ್ಕೆ ಆಕ್ಸಿಜನ್ ಕೊಡಬಾರದು ಎಂದು ಅಧಿಕಾರಿಗೆ ಯಾರು ಒತ್ತಡ ಹಾಕಿದ್ದರು ಎಂಬುದನ್ನು ಕೂಡಲೇ ಬಹಿರಂಗಪಡಿಸಿ, ಆ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಿ. ಡ್ರಗ್ ಕಂಟ್ರೋಲರ್, ಮೈಸೂರು ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಿ, ನಂತರ ತನಿಖೆ ನಡೆಸಿ ಎಂದು ಒತ್ತಾಯಿಸಿದರು.
ಇದು ಜನರ ಜೀವನದ ಪ್ರಶ್ನೆ. ಇಂತಹ ಉದ್ಧಟತನದ ಅಧಿಕಾರಿಗಳನ್ನು ಇಟ್ಟುಕೊಂಡು ಜನರ ಜೀವನ ಜೊತೆ ಆಟ ಆಡಬೇಡಿ ಎಂದು ಆಕ್ರೋಶದಿಂದ ನುಡಿದರು.
ಮೈಸೂರಂತಹ ದೊಡ್ಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪ್ರಾಮಾಣಿಕ, ದಕ್ಷ, ಅನುಭವಿ ಅಧಿಕಾರಿಯನ್ನು ನೇಮಿಸಿ. ಇಲ್ಲದಿದ್ದರೆ ಚಾಮರಾಜನಗರದಲ್ಲಾದಂತೆ ಮೈಸೂರಿನಲ್ಲೂ ದುರಂತ ಸಂಭವಿಸಬಹುದು. ಚಾಮರಾಜನಗರ ಜಿಲ್ಲೆಗೆ ದಿನಕ್ಕೆ 350 ಆಕ್ಸಿಜನ್ ಸಿಲಿಂಡರ್ ಬೇಕು. ಆದರೆ, ಐದು ದಿನದಲ್ಲಿ ಬಂದಿದ್ದು ಕೇವಲ 650 ಸಿಲಿಂಡರ್. ಡ್ರಗ್ ಕಂಟ್ರೋಲರ್ ಈ ಬಗ್ಗೆ ಯಾಕೇ ಮಾಹಿತಿ ನೀಡಲಿಲ್ಲ ಅಷ್ಟು ಪ್ರಮಾಣದಲ್ಲಿ ಯಾಕೇ ಒದಗಿಸಲು ಆಗುವುದಿಲ್ಲ ಎಂಬ ಮಾಹಿತಿಯನ್ನಾದರೂ ಅಧಿಕಾರಿಯು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಬೇಕಿತ್ತು. ಮಾಹಿತಿಯನ್ನೂ ನೀಡದೇ ಅಮಾಯಕರ ಸಾವಿಗೆ ಕಾರಣರಾದವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.