Thursday, June 30, 2022

Latest Posts

ರಾಷ್ಟ್ರೀಯ ನೂತನ ಶಿಕ್ಷಣ ನೀತಿ ತರಾತುರಿಯ ಅನುಷ್ಠಾನ ಅಲ್ಲ: ಡಾ.ಸಿ.ಎನ್.ಅಶ್ವಥ್ ನಾರಾಯಣ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………

ಹೊಸ ದಿಗಂತ ವರದಿ, ಮಂಗಳೂರು:

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಠಾನ ಮಾಡುತ್ತಿಲ್ಲ. ಅದನ್ನು ರೂಪಿಸಲು ಐದೂವರೆ ವರ್ಷಗಳ ಅವಧಿಯನ್ನು ತೆಗೆದುಕೊಳ್ಳಲಾಗಿದೆ. ಆ ಅವಧಿಯಲ್ಲಿ ಮೂರು ಲಕ್ಷಗಳಿಗಿಂತಲೂ ಅಧಿಕ ಸಲಹೆಗಳನ್ನು ಪಡೆಯಲಾಗಿದೆ. ಜನ ಸಾಮಾನ್ಯರು, ರಾಜ್ಯ ಸರಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಸಲಹೆ ಸೂಚನೆಗಳನ್ನು ನೀಡಿವೆ. ಆ ಸಲಹೆ ಸೂಚನೆಗಳನ್ನು ನೂತನ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ ತಿಳಿಸಿದ್ದಾರೆ.
ಅವರು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆತುರದಲ್ಲಿ ಜಾರಿ ಮಾಡಲಾಗುತ್ತಿದೆ ಎಂಬ ಕೆಲವು ಸಂಘಟಣೆಗಳ ಹೇಳಿಕೆಗಳು ಸರಿಯಲ್ಲ ಎಂದರು.
೨೦೨೦ರ ಜುಲೈ ತಿಂಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಘೋಷಿಸಿದ್ದಾರೆ. ೨೦೨೧ರಿಂದ ನೂತನ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ಅವರು ಆ ಸಂದರ್ಭದಲ್ಲಿ ಪ್ರಕಟಿಸಿದ್ದರು ಎಂದು ಹೇಳಿದ ಉನ್ನತ ಶಿಕ್ಷಣ ಸಚಿವರು, ಈಗ ನೀಡುತ್ತಿರುವ ಶಿಕ್ಷಣ ಪದ್ದತಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗುತ್ತಿದೆ ಎಂದರು.
ಪಠ್ಯಕ್ರಮ, ಬೋಧನೆ ಮತ್ತು ಮೌಲ್ಯಮಾಪನ ಕ್ರಮದಲ್ಲಿ ಸುಧಾರಣೆಯೊಂದಿಗೆ ಬಹು ಶಿಸ್ತೀಯ ವಿಷಯಗಳ ಅಧ್ಯಯನಕ್ಕೆ ಅವಕಾಶ ಸಿಗಲಿದೆ. ಭವಿಷ್ಯದಲ್ಲಿ ಅಂತರ್ ಶಿಸ್ತೀಯ ವಿಷಯಗಳ ಅಧ್ಯಯನದ ಉದ್ದೇಶವೂ ಎನ್‌ಇಪಿಯಲ್ಲಿ ಇರಲಿದೆ. ಶಿಕ್ಷಣದಲ್ಲಿ ಸುಧಾರಣೆಗಳೇ ಪರಿಹಾರಗಳಾಗಿ ಬಲಿಷ್ಠ ಸಮಾಜ ಕಟ್ಟಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿಯಾಗಲಿದೆ ಎಂದು ಸಚಿವ ಅಶ್ವಥನಾರಾಯಣ ನುಡಿದರು.
ವಿದ್ಯಾರ್ಥಿಗಳ ಪ್ರಗತಿ ಮತ್ತು ಸಬಲೀಕರಣಕ್ಕೆ ಎನ್‌ಇಪಿ ಪೂರಕವಾಗಲಿದೆಯೇ ಹೊರತು ಮಾರಕವಾಗುವ ಯಾವುದೇ ಅಂಶಗಳು ಅದರಲ್ಲಿ ಇಲ್ಲ ಎಂದು ಹೇಳಿದ ಉನ್ನತ ಶಿಕ್ಷಣ ಸಚಿವರು ಪ್ರಸಕ್ತ ವರ್ಷ ಶೈಕ್ಷಣಿಕ ಸುಧಾರಣೆಗಳನ್ನು ಮಾತ್ರ ಕೈಗೆತ್ತಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಡಳಿತಾತ್ಮಕ ಸುಧಾರಣೆಗಳ ಗುರಿ ಹೊಂದಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿರುವ ವಿಷಯಗಳ ಹೊರತಾಗಿ ಹೊರಗಿನ ಸಂಸ್ಥೆಗೊಂದಿಗೆ ಸಹಭಾಗಿತ್ವ ಮತ್ತು ಹೊಂದಾಣಿಕೆ ಪಡೆದು ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿಯನ್ನು ವಿಸ್ತರಿಸಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅವಕಾಶ ಮಾಡಿ ಕೊಡುತ್ತದೆ. ಸಮಾಜದಲ್ಲಿರುವ ಸಂಪನ್ಮೂಲವನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿ ಉತ್ತಮವಾಗಿ ಕಲಿಯಲು ಅವಕಾಶ ಲಭ್ಯವಾಗಬೇಕು ಎಂಬುದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಕುಲಸಚಿವ ಡಾ.ಕಿಶೋರ್‌ಕುಮಾರ್ ಸಿ.ಕೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss