ಹೊಸದಿಗಂತ ಆನ್ ಲೈನ್ ಡೆಸ್ಕ್:
ದಾಳಿ ಎಚ್ಚರಿಕೆ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ತನ್ನ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದೆ. ಈ ಕುರಿತು ನ್ಯೂಜಿಲ್ಯಾಂಡ್ ಕ್ರಿಕೆಟ್ (NZC) ಹೇಳಿಕೆಯನ್ನು ನೀಡುವ ಮೂಲಕ ಈ ಮಾಹಿತಿಯನ್ನು ನೀಡಿದೆ.
ರಾವಲ್ಪಿಂಡಿಯಲ್ಲಿ ನಡೆದ ಗಲಾಟೆಯಿಂದಾಗಿ ಪಂದ್ಯದ ಆರಂಭವು ವಿಳಂಬವಾಯಿತು. ಜೊತೆಗೆ ಇದರಿಂದ ಆಟಗಾರರನ್ನು ತಮ್ಮ ಕೋಣೆಗಳಲ್ಲಿ ಉಳಿಯುವಂತೆ ಹೇಳಲಾಯಿತು. ಈ ಅಪಾಯಕಾರಿ ಸನ್ನಿವೇಶ ಮನಗಂಡ ನ್ಯೂಜಿಲೆಂಡ್ ಈ ಪ್ರವಾಸವನ್ನು ರದ್ದು ಮಾಡಿದೆ. ಭದ್ರತಾ ಕಾರಣಗಳಿಂದಾಗಿ ಈ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ನ್ಯೂಜಿಲೆಂಡ್ ಹೇಳಿದೆ.
ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ದೇಶದ ಪ್ರಧಾನಿ, ಇಮ್ರಾನ್ ಖಾನ್ ಕೂಡ ಅವರನ್ನು ತಡೆಯಲು ಪ್ರಯತ್ನಿಸಿದರು. ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿಗೆ ಕರೆ ಮಾಡಿದ್ದ ಇಮ್ರಾನ್ ಖಾನ್, ನಿಮ್ಮ ನಿರ್ಧಾರ ದೇಶದ ಗೌರವವನ್ನು ಕುಂಠಿತಗೊಳಿಸಿದೆ. ವಾಪಸ್ ಹೋಗುಬೇಡಿ ಎಂದು ಕೇಳಿಕೊಂಡಿದ್ದಾರೆ.
ಆಟಗಾರರಿಗೆ ಸಂಪೂರ್ಣ ಭದ್ರತೆಯ ಭರವಸೆ ನೀಡಿದ ಪಿಸಿಬಿ
ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ದಿಢೀರ್ ನಿರ್ಧಾರದಿಂದಾಗಿ ಆಘಾತಕ್ಕೊಳಗಾಗಿರುವ ಪಿಸಿಬಿ ನ್ಯೂಜಿಲೆಂಡ್ ಎಲ್ಲ ಆಟಗಾರರಿಗೆ ಸಂಪೂರ್ಣ ಭರವಸೆ ನೀಡುವುದಾಗಿ ಹೇಳಿದೆ. ಈಗಾಗಲೇ ಆಟಗಾರರಿಗೆ ಫೂಲ್ಪ್ರೂಫ್ ಭದ್ರತಾ ವ್ಯವಸ್ಥೆಯನ್ನು ಮಾಡಿದೆ ಎಂದು ಹೇಳಿದೆ.
ನ್ಯೂಜಿಲ್ಯಾಂಡ್ ಪ್ರಧಾನಿಗೆ ಕರೆ ಮಾಡಿದ ಪಾಕ್ ಪ್ರಧಾನಿ
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನ್ಯೂಜಿಲ್ಯಾಂಡ್ ಪ್ರಧಾನಿಯೊಂದಿಗೆ ಫೋನಿನಲ್ಲಿ ಮಾತನಾಡಿ, ತನ್ನ ಭದ್ರತಾ ವ್ಯವಸ್ಥೆಯನ್ನು ವಿಶ್ವದ ಅತ್ಯುತ್ತಮ ಎಂದು ಹೇಳಿದರು. ಜೊತೆಗೆ ಕಿವಿ ತಂಡಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಆದರೆ, ಪಾಕ್ ಪ್ರಧಾನಿಯ ಮಾತಿಗೆ ಸೊಪ್ಪು ಹಾಕದ ನ್ಯೂಜಿಲೆಂಡ್ ಕೂಡಲೇ ಆಟಗಾರರನ್ನು ಪಾಕಿಸ್ತಾನದಿಂದ ಹೊರಟು ಬರುವಂತೆ ಆದೇಶ ಹೊರಡಿಸಿದೆ.