“ಭಾರತದ ಮುಸ್ಲಿಮರೂ ಪಾಕಿಸ್ತಾನಕ್ಕೆ ವೋಟ್ ಮಾಡಿದ್ದರು”- ಇಮ್ರಾನ್ ಖಾನ್ ಹೇಳಿದ್ದು ಸತ್ಯವಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸಮತ ಕಳೆದುಕೊಳ್ಳುವುದು ಬಹುತೇಕ ಪಕ್ಕಾ ಆಗಿರುವುದರಿಂದ ಆ ದೇಶದಲ್ಲೀಗ ಎಲ್ಲ ರಾಜಕೀಯ ಪಕ್ಷಗಳೂ ಸಮಾವೇಶಗಳನ್ನು ಮಾಡುತ್ತ ತಮ್ಮ ರಾಜಕೀಯ ಶಕ್ತಿ ಪ್ರದರ್ಶನಗಳನ್ನು ಮಾಡುತ್ತಿವೆ.

ಇಂಥದೊಂದು ಸಮಾವೇಶದಲ್ಲಿ ಮಾತನಾಡುತ್ತ ಇಮ್ರಾನ್ ಖಾನ್ ಹೇಳಿದ್ದು- “ಪಾಕಿಸ್ತಾನದ ಸ್ಥಾಪನೆಯಾಗುವುದಕ್ಕೆ ಭಾರತದ ಮುಸ್ಲಿಮರೂ ಮತ ನೀಡಿದ್ದರು. ರಿಯಾಸತ್ ಎ ಮದೀನಾ ಎಂಬ ಪರಿಕಲ್ಪನೆಯನ್ನು ಭಾರತೀಯ ಮುಸ್ಲೀಮರೂ ಇಷ್ಟಪಡುತ್ತಾರೆ” ಎನ್ನುವ ಮೂಲಕ ತಾವು ಅಂತಹ ರಿಯಾಸತ್ ಎ ಮದೀನಾ ನಿರ್ಮಾಣಕ್ಕೆ ಬದ್ಧರಾಗಿರೋದಾಗಿ ಇಮ್ರಾನ್ ಹೇಳುತ್ತಿದ್ದಾರೆ.

 

ಪಾಕಿಸ್ತಾನ ನಿರ್ಮಾಣಕ್ಕೆ ಭಾರತೀಯ ಮುಸ್ಲೀಮರೂ ಮತ ಹಾಕಿದ್ದು ಹೌದೇ?

ಈ ವಿಷಯದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸುಳ್ಳಾಡಿದ್ದಾರೆ ಎನ್ನುವಂತಿಲ್ಲ. 1946ರ ಪ್ರಾಂತೀಯ ಚುನಾವಣೆಗಳಲ್ಲಿ ಭಾರತದ ಮುಸ್ಲಿಮರು ಅತಿಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಲೀಗ್ ಗೆ ಮತ ಹಾಕಿದ್ದರು. ಪಾಕಿಸ್ತಾನವೆಂಬ ಪ್ರತ್ಯೇಕ ರಾಷ್ಟ್ರದ ನಿರ್ಮಾಣವನ್ನೇ ಮುಸ್ಲಿಂ ಲೀಗ್ ತನ್ನ ಮುಖ್ಯ ಕಾರ್ಯಸೂಚಿಯನ್ನಾಗಿಸಿ ಚುನಾವಣೆಗೆ ಹೋಗಿತ್ತಾದ್ದರಿಂದ ಅವರೆಲ್ಲ ಪರೋಕ್ಷವಾಗಿ ಪಾಕಿಸ್ತಾನ ನಿರ್ಮಾಣದ ಪರ ಇದ್ದರು ಎಂಬ ವಾದ ಅಲ್ಲಗೆಳೆಯಲಾಗುವುದಿಲ್ಲ.

ಆದರೆ, ಇದಕ್ಕೆ ಪ್ರತಿವಾದವೂ ಒಂದಿದೆ. ಅದೇನೆಂದರೆ, ಆಗಿನ ಚುನಾವಣೆಗಳಲ್ಲಿ ಮತದಾನದ ಹಕ್ಕನ್ನು ಸೀಮೀತ ಜನರಿಗೆ ಮಾತ್ರ ಕೊಡಲಾಗಿತ್ತು. ಹೀಗಾಗಿ ಅದನ್ನು ಮುಸ್ಲಿಂ ಸಮುದಾಯದವರೆಲ್ಲರ ಧ್ವನಿ ಎಂದು ಹೇಳಲಾಗುವುದಿಲ್ಲ ಎಂಬುದು. ಅದೇನೇ ಇದ್ದರೂ ಅಂಥ ಸೀಮಿತ ಹಕ್ಕು ಎಲ್ಲ ಮತಾನುಯಾಯಿಗಳಿಗೂ ಇತ್ತಾದ್ದರಿಂದ ಅವತ್ತಿಗೆ ಅದೇ ಮಾದರಿ.

ಆದರೆ ದುರಂತವೇನು ಗೊತ್ತೇ? ಇವತ್ತಿನ ಉತ್ತರ ಪ್ರದೇಶದ ಆಗಿನ ಪ್ರಾಂತ್ಯಗಳು ಮುಸ್ಲಿಂ ಲೀಗ್ ಗೆ ದೊಡ್ಡ ಸಂಖ್ಯೆಯಲ್ಲಿ ಮತ ಹಾಕಿದವು. ಆದರೆ, ದೇಶ ವಿಭಜನೆಯಾದಾಗ ಇಲ್ಲಿನ ಮುಸ್ಲಿಮರೇನೂ ಪಾಕಿಸ್ತಾನಕ್ಕೆ ತೆರಳಲಿಲ್ಲ. ದೇಶ ವಿಭಜನೆಯ ಹಿಂಸೆ-ತಲ್ಲಣಗಳನ್ನು ಅನುಭವಿಸಿದವರು ಪಂಜಾಬ್ ಮತ್ತು ಅವತ್ತಿನ ಬಂಗಾಳದ ಜನರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!