ಪಾಕ್‌ ಸರ್ಕಾರ ಪತನಕ್ಕೆ ವಿದೇಶಿ ಸಂಚು ನಡೆದಿದೆ ಎಂದ ಇಮ್ರಾನ್‌ ಖಾನ್‌; ಆರೋಪದಲ್ಲಿ ಸತ್ಯಾಂಶವಿಲ್ಲ ಎಂದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತಮ್ಮ ನೇತೃತ್ವದ ಸರ್ಕಾರವನ್ನು ಪತನಗೊಳಿಸಲು ಅಮೆರಿಕ ಷಡ್ಯಂತ್ರ ನಡೆಸಿದೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸ್ಫೋಟಕ ಆರೋಪ ಮಾಡಿದ್ದಾರೆ.
ಅಮೆರಿಕ ಅಧಿಕಾರಿಯೊಬ್ಬರಿಂದ ಪಾಕ್‌ ರಾಯಭಾರಿಗೆ ರವಾನೆಯಾಗಿರುವ ಪತ್ರವನ್ನು ಇಮ್ರಾನ್‌ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.
ಇಮ್ರಾನ್‌ ರನ್ನು ತಕ್ಷಣವೇ ಅಧಿಕಾರದಿಂದ ಕೆಳಗಿಳಿಸಬೇಕು. ಇಲ್ಲವಾದಲ್ಲಿ ದೇಶವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂಬ ಬೆದರಿಕೆಯ ಸಾಲುಗಳು ಪತ್ರದಲ್ಲಿವೆ, ತನ್ನನ್ನು ಅಧಿಕಾರದಿಂದ ಕೆಳಕ್ಕಿಳಿಸಲು ವಿದೇಶಿ ಶಕ್ತಿಗಳು ಫಿತೂರಿ ನಡೆಸಿರುವುದಕ್ಕೆ ಈ ಪತ್ರವೇ ಸಾಕ್ಷಿ ಎಂದು ಇಮ್ರಾನ್‌ ಹೇಳಿದ್ದಾರೆ. ಪತ್ರವು ಬಿಡುಗಡೆಯಾದ ಬೆನ್ನಲ್ಲೇ ಪಾಕ್‌ ಸುಪ್ರೀಂ ಕೋರ್ಟ್‌ ಗೆ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಇಮ್ರಾನ್‌ ಸರ್ಕಾರ ಪತನಕ್ಕೆ ವಿದೇಶಗಳು ನಡೆಸಿದ ಸಂಚಿನ ಕುರಿತು ತನಿಖೆ ನಡೆಸುವಂತೆ ಹಾಗೂ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ತಡೆಯಾಜ್ಞೆ ತರುವಂತೆ ಎಂದು ಸುಪ್ರೀಂಗೆ ಮನವಿ ಮಾಡಲಾಗಿದೆ.

ಅಮೆರಿಕ ಪ್ರತಿಕ್ರಿಯೆ:
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿರುವುದರಲ್ಲಿ ತನ್ನ ಹಸ್ತಕ್ಷೇಪ ಇರುವುದರ ಕುರಿತಾದ ಆರೋಪಗಳನ್ನು ಅಮೆರಿಕ ತಳ್ಳಿಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಸರ್ಕಾರದ ವಕ್ತಾರ, ಇಮ್ರಾನ್‌ ಖಾನ್ ಆರೋಪಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!