ಗಾಂಧೀಜಿ, ಪಟೇಲ್ ಕನಸಿನ ಭಾರತ ಕಟ್ಟಲು 8 ವರ್ಷಗಳು ಶ್ರಮಿಸಿದ್ದೇವೆ: ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಂಟು ವರ್ಷಗಳ ನಮ್ಮ ಆಡಳಿತದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಕನಸಿನ ಭಾರತವನ್ನು ಕಟ್ಟಲು ಶ್ರಮಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶನಿವಾರ (ಮೇ 28, 2022) ಗುಜರಾತ್‌ನ ರಾಜ್‌ಕೋಟ್‌ನ ಅಟ್ಕೋಟ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಮಾಥುಶ್ರೀ ಕೆಡಿಪಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರು. ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ  ಪ್ರಧಾನಿ ಮೋದಿ ಬಡವರು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರು ಸಬಲರಾಗಬೇಕೆಂದು ಬಾಪೂಜಿ ಕನಸಾಗಿತ್ತು. ಅದನ್ನು ನನಸು ಮಾಡಲು ನಮ್ಮ ಸರ್ಕಾರ ಶ್ರಮಿಸಿದೆ. ಇಲ್ಲಿವರೆಗೂ ಜನ ನಾಚಿಕೆಪಡುವಂತಹ ಯಾವುದೇ ಕೆಲಸವನ್ನು ನಾವು ಮಾಡಿಲ್ಲ ಎಂದರು.

ಮಹಿಳೆಯರ ಗೌರವಯುತ ಜೀವನಕ್ಕಾಗಿ ಜನ್ ಧನ್  ಯೋಜನೆಯು ಉಪಯುಕ್ತವಾಗಿದೆ ಎಂದರು. ರೈತರು ಮತ್ತು ಕಾರ್ಮಿಕರ ಜನ್ ಧನ್ ಖಾತೆಗೆ ನೇರವಾಗಿ ನಗದು ಜಮಾ ಮಾಡಲಾಗಿದೆ. ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವುದರ ಜೊತೆಗೆ, ಜನರಿಗೆ  ಉಚಿತ ಲಸಿಕೆಗಳನ್ನು ನೀಡಲಾಯಿತು.

ಸರ್ಕಾರದ ಶ್ರಮಕ್ಕೆ ಜನರ ಶ್ರಮ ಸೇರಿದಾಗ ಸೇವಾ ಶಕ್ತಿ ಹೆಚ್ಚುತ್ತದೆ ಅದಕ್ಕೆ ಈ ಆಸ್ಪತ್ರೆಯೇ ನಿದರ್ಶನ ಎಂದರು. ವಿಶ್ವದ ಇತರ ದೇಶಗಳಂತೆ ಭಾರತವು ಕೋವಿಡ್ -19 ವಿರುದ್ಧ ಹೋರಾಡುತ್ತಿರುವುದರಿಂದ ಎಲ್ಲಾ ಜನರಿಗೆ ಉಚಿತವಾಗಿ ಲಸಿಕೆ ಸಿಗುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು. ತಮ್ಮನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದ ಗುಜರಾತ್ ಜನರಿಗೆ ಮೋದಿ ಧನ್ಯವಾದ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!