Thursday, August 18, 2022

Latest Posts

ಶಿಕ್ಷಣದ ಜತೆಗೆ ಕೌಶಲ್ಯತೆಯೂ ಮುಖ್ಯ: ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ

ಹೊಸ ದಿಗಂತ ವರದಿ, ಚಿತ್ರದುರ್ಗ:

ಸಮಾಜದಲ್ಲಿ ಸಬಲೀಕರಣ, ಪ್ರಗತಿ, ಸುಧಾರಣೆ ಕಾಣಲು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಕೌಶಲ್ಯತೆಗೂ ಆದ್ಯತೆ ನೀಡಬೇಕು ಎಂದು ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.
ನಗರದ ಕುಂಚಿಗನಾಳ್ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು (ಜಿಟಿಟಿಸಿ) ಉದ್ಘಾಟಿಸಿ ಅವರು ಮಾತನಾಡಿದರು.
ಕೌಶಲ್ಯತೆ ಮತ್ತು ಶಿಕ್ಷಣ ಎರಡು ಜೊತೆಯಲ್ಲಿಯೇ ಪಡೆಯಬೇಕು. ಶಿಕ್ಷಣ, ಕೌಶಲ್ಯ ಪಡೆದು ನಮ್ಮ ಜೀವನದ ಭವಿಷ್ಯ ರೂಪಿಸಿಕೊಳ್ಳುವ ಜೊತೆಜೊತೆಯಲ್ಲಿಯೇ ಸಮಾಜದ ಭವಿಷ್ಯವನ್ನು ನಮ್ಮ ವೃತ್ತಿ, ಜ್ಞಾನ, ಕೌಶಲ್ಯದ ಮೂಲಕ ಸಮಾಜಕ್ಕೆ, ಕುಟುಂಬಕ್ಕೆ ಆರ್ಥಿಕ ಶಕ್ತಿ ಕೊಡಲು ಸಾಧ್ಯವಾಗುತ್ತದೆ. ಶಿಕ್ಷಣ ಮತ್ತು ಕೌಶಲ್ಯ ಎಲ್ಲ ಕ್ಷೇತ್ರಕ್ಕೂ ಅನ್ವಯವಾಗಲಿದೆ ಎಂದರು.
ಯುವಕರಿಗೆ ಬೇಕಾಗಿರುವ ಕೌಶಲ್ಯ ಎಲ್ಲ ಕಡೆ ಕೊಡಲಾಗುತ್ತಿದೆ. ಆದರೆ ಮಾಹಿತಿ ಕೊರತೆಯಿಂದ ಉತ್ತಮವಾಗಿ ಅವಕಾಶಗಳ ಬಳಕೆಯಾಗುತ್ತಿಲ್ಲ.ಇದನ್ನು ಬಗೆಹರಿಸಲು ಟೆಕ್ನಿಕಲ್ ಪ್ಲಾಟ್ ಫಾರಂ ನಿರ್ಮಾಣ ಮಾಡಲಾಗಿದೆ. ಈ ಪ್ಲಾಟ್ ಫಾರಂ ಮೂಲಕ ಸ್ಕಿಲ್ ಕನೆಕ್ಟ್ ಮೂಲಕ ನಾಡಿನ ಯುವಕರಿಗೆ ಕೌಶಲ್ಯತೆ, ಉದ್ಯೋಗ, ಸಬಲೀಕರಣ, ಸಹಕಾರ, ಶಿಕ್ಷಣ ಪಡೆದುಕೊಳ್ಳಲು ಈ ಪ್ಲಾಟ್ ಫಾರಂಗೆ ನೋಂದಾಯಿಸಿಕೊಳ್ಳುವ ಮೂಲಕ ವಿದ್ಯಾರ್ಥಿ ಬಯಸಿದನ್ನೂ ಸರ್ಕಾರದ ವತಿಯಿಂದ ಉಚಿತವಾಗಿ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶ ಕೊಡಿಸಲು ಉದ್ಯೋಗ ಹಾಗೂ ಬೇಡಿಕೆ ಆಧಾರಿತವಾಗಿ ಯುವಕರಿಗೆ ತರಬೇತಿ ಕೊಡಲಾಗುತ್ತಿದೆ ಎಂದರು.
ಸರ್ಕಾರವು ಕೌಶಲ್ಯತೆಗೆ, ತಾಂತ್ರಿಕತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಐಟಿಐ ಕಾಲೇಜುಗಳಿಗೆ ೫೦೦೦ ಕೋಟಿ ರೂ. ಖರ್ಚು ಮಾಡಿ ೨೭೦ ಐಟಿಐ ಕಾಲೇಜುಗಳಲ್ಲಿ 150 ಐಟಿಐಗಳನ್ನು ಆಯ್ಕೆ ಮಾಡಿ ವಿಶ್ವದರ್ಜೆ ಮಟ್ಟದ ತರಬೇತಿ ಮತ್ತು ಮೂಲಸೌಕರ್ಯ ಕೊಟ್ಟು ಒಂದೊಂದು ಸಂಸ್ಥೆಗೂ 30ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ೩೫,೦೦೦ ಸೀಟುಗಳು ಭರ್ತಿಯಾಗಿವೆ ಎಂದು ಹೇಳಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಬರಗಾಲದ ಪ್ರದೇಶ. ಶೇ.೯೦ರಷ್ಟು ಜನರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಇಲ್ಲಿನ ಜನರಿಗೆ ಶಿಕ್ಷಣವೇ ಆಶ್ರಯ. ಜಿಟಿಟಿಸಿ ಕೇಂದ್ರದಲ್ಲಿ ತರಬೇತಿ ಪಡೆದರೆ ಉದ್ಯೋಗ ಖಾತ್ರಿಯಿದ್ದಂತೆ. ಈ ಕೇಂದ್ರದಲ್ಲಿ ಸದ್ಯಕ್ಕೆ ಎರಡು ಕೋರ್ಸ್‌ಗಳಿಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
ಜಿಟಿಟಿಸಿ ಕೇಂದ್ರಕ್ಕೆ ವಸತಿನಿಲಯ ಸೌಲಭ್ಯ, ಸರ್ಕಾರಿ ವಿಜ್ಞಾನ ಕಾಲೇಜಿಗೆ ಕಟ್ಟಡಕ್ಕೆ ಅನುದಾನ ಮಂಜೂರಾತಿ ಅನುದಾನ ನೀಡಬೇಕು. ಚಿತ್ರದುರ್ಗ ನಗರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಗೆ ಜಿಟಿಟಿಸಿ ಕೇಂದ್ರ ಅತೀ ಅವಶ್ಯಕವಾಗಿ ಬೇಕಾಗಿದೆ. ಯುವಕರಲ್ಲಿ ಕೈಯಲ್ಲಿ ತಾಂತ್ರಿಕತೆ, ಕೌಶಲ್ಯತೆ ಇದ್ದರೆ ಸ್ವಯಂ ಉದ್ಯೋಗಿ ಹಾಗೂ ಸ್ವಾವಲಂಬಿಯಾಗಿ ಜೀವನ ಮಾಡಲು ಸಾಧ್ಯವಾಗಲಿದೆ. ಹಾಗಾಗಿ ಜಿಲ್ಲೆಯ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೌಶಲ್ಯಾಧಾರಿತ ತರಬೇತಿ ನೀಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ಹ.ರಾಘವೇಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!