ಹೊಸದಿಗಂತ ಆನ್ ಲೈನ್ ಡೆಸ್ಕ್:
ಆಸ್ಟ್ರೇಲಿಯಾದ ಹಲವು ನಗರಗಳಲ್ಲಿ ಭೀಕರ ಸೆರೊಜಾ ಚಂಡಮಾರುತ ಅಪ್ಪಳಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಪಶ್ಚಿಮ ಆಸ್ಟ್ರೇಲಿಯಾದ ಪ್ರದೇಶಗಳಿಗೆ ಚಂಡಮಾರುತ ಅಪ್ಪಳಿಸಿದ್ದು, 170 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಇದರಿಂದ ಕಲ್ಬಾರ್ರಿ ನಗರದಲ್ಲಿ ಶೇಕಡ 70ರಷ್ಟು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಧಕ್ಕೆಯಾಗಿರುವುದರಿಂದ ಕೆಲವು ನಗರಗಳಲ್ಲಿ ಕಗ್ಗತ್ತಲು ಆವರಿಸಿದೆ. ಸುಮಾರು 31 ಸಾವಿರ ಗ್ರಾಹಕರಿಗೆ ತೊಂದರೆಯಾಗಿದೆ.
ಆಸ್ಪ್ರೇಲಿಯಾದಲ್ಲಿ ಬಲವಾದ ಚಂಡಮಾರುತ ಅಪ್ಪಳಿಸುವುದು ಅಪರೂಪ. ಕಳೆದ 50 ವರ್ಷಗಳಲ್ಲೇ ಇದು ಬಲಿಷ್ಠ ಚಂಡಮಾರುತವಾಗಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ತಿಳಿಸಿದೆ.
ಇಂಡೊನೇಷ್ಯಾ ಮತ್ತು ಪೂರ್ವ ತಿಮೊರ್ನಲ್ಲಿ ಕಳೆದ ವಾರ ಅಪ್ಪಳಿಸಿದ್ದ ‘ಸೆರೊಜಾ’ ಚಂಡಮಾರುತದಿಂದ ಭೂಕುಸಿತ ಮತ್ತು ಪ್ರವಾಹ ಸಂಭವಿಸಿದ್ದರಿಂದ 174ಮಂದಿ ಮೃತಪಟ್ಟಿದ್ದರು.