ಹರ್ಯಾಣದಲ್ಲೂ ಈಗ ಮತಾಂತರ ನಿಯಂತ್ರಣ ಕಾಯ್ದೆಗೆ ಸಂಪುಟ ಅಸ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತಾಂತರ ನಿಯಂತ್ರಣ ಕಾಯ್ದೆಗೆ ಹರ್ಯಾಣ ಸಂಪುಟದಲ್ಲಿ ಒಪ್ಪಿಗೆ ದೊರಕಿದೆ. ಮಂಗಳವಾರ ಹರ್ಯಾಣ ಕಾನೂನು ಬಾಹಿರ ಧರ್ಮ ಮತಾಂತರ ತಡೆ ಮಸೂದೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದ್ದು, ಕರಡನ್ನು ಅನುಮೋದಿಸಿದೆ.

ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಕರಡು ಮಸೂದೆ ಮಂಡನೆಯಾಗಲಿದೆ. ಬಲವಂತ, ಅನಗತ್ಯ ಪ್ರಭಾವ, ಆಮಿಷ, ಮದುವೆ ಅಥವಾ ಯಾವುದೇ ಇನ್ನಿತರ ಮೋಸದ ವಿಧಾನಗಳ ಮೂಲಕ ಮತಾಂತರ ಮಾಡಿದರೆ ಇದು ಅಪರಾಧ. ಇದು ಲವ್ ಜಿಹಾದ್ ವಿರುದ್ಧದ ಕಾನೂನು ಎಂದು ಹೇಳಲಾದರೂ, ಪ್ರಾಥಮಿಕವಾಗಿ ಬಲವಂತದ ಮತಾಂತರ ನಿಲ್ಲಿಸುವ ಗುರಿಯನ್ನು ಕಾಯ್ದೆ ಹೊಂದಿದೆ ಎಂದು ರಾಜ್ಯ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಬಲಪಂಥೀಯ ಕಾರ್ಯಕರ್ತರು ಮುಸ್ಲಿಂ ಪುರುಷರು ಹಾಗೂ ಹಿಂದೂ ಮಹಿಳೆಯರ ನಡುವಿನ ವೈವಾಹಿಕ ಸಂಬಂಧಗಳನ್ನು ವಿವರಿಸಲು ಲವ್ ಜಿಹಾದ್ ಪದಬಳಕೆ ಮಾಡುತ್ತಾರೆ. ಆದರೆ ನ್ಯಾಯಾಲಯಗಳು ಮತ್ತು ಕೇಂದ್ರ ಸರ್ಕಾರ ಈ ಪದವನ್ನು ಅಧಿಕೃತವಾಗಿ ಗುರುತಿಸಿಲ್ಲ. ಸಾಮೂಹಿಕ ಹಾಗೂ ವೈಯಕ್ತಿಕ ಎರಡೂ ರೀತಿಯ ಧಾರ್ಮಿಕ ಮತಾಂತರಗಳ ಹಲವಾರು ಪ್ರಕರಣಗಳು ಕಣ್ಣ ಮುಂದಿವೆ. ಆಮಿಷಗಳನ್ನು ಒಡ್ಡಿ ಅಥವಾ ಅನಗತ್ಯವಾದ ಪ್ರಭಾವ ಬೀರಿ ಮತಾಂತರ ಮಾಡಿರುವ ಸಂದರ್ಭಗಳಿವೆ. ಕೆಲವರಿಗೆ ಇತರೆ ಧರ್ಮಗಳಿಗೆ ಮತಾಂತರಗೊಳ್ಳುವಂತೆ ಬಲವಂತ ಮಾಡಲಾಗಿದೆ. ಇತರ ಧರ್ಮಗಳ ದುರ್ಬಲ ವರ್ಗಗಳ ಜನರಿಗೆ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ.

ಇತ್ತೀಚೆಗೆ ಜನರು ತಮ್ಮ ಧರ್ಮದ ಬಲವನ್ನು ಹೆಚ್ಚಿಸುವ ಅಜೆಂಡಾದೊಂದಿಗೆ ಮತಾಂತರ ಮಾಡುತ್ತಿದ್ದಾರೆ. ತಮ್ಮ ಧರ್ಮವನ್ನು ತಪ್ಪಾಗಿ ನಿರೂಪಿಸಿ ಅಥವಾ ಕೆಲ ವಿಷಯಗಳನ್ನು ಮರೆಮಾಚಿ ಇತರ ಧರ್ಮದವರನ್ನು ಮದುವೆಯಾಗುತ್ತಾರೆ. ತದನಂತರ ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಾರೆ ಎಂದು ಕರಡಿನಲ್ಲಿ ಉಲ್ಲೇಖವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!