Monday, August 8, 2022

Latest Posts

ತರಾತುರಿಯಲ್ಲಿ ಶಾಲೆ ಆರಂಭ ಬೇಡ: ಮನ್ಸೂರ್ ಆಲಿ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.2 ಕ್ಕಿಂತ ಕಡಿಮೆ ಇದೆ ಎಂದು ಲೆಕ್ಕ ತೋರಿಸಿ ತರಾತುರಿಯಲ್ಲಿ ಶಾಲೆಗಳನ್ನು ಆರಂಭಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲವೆಂದು ಜಾತ್ಯತೀತ ಜನತಾ ದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ.ಮನ್ಸೂರ್ ಆಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಡಿಕೇರಿಯ ಬಾಲಕಿಯರ ಬಾಲಮಂದಿರದಲ್ಲಿ ಸುಮಾರು 35 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಪರಿಸ್ಥಿತಿ ಹೀಗಿರುವಾಗ ಶಾಲೆಗಳಲ್ಲಿ ವಿದ್ಯಾರ್ಥಿಗಳು ಗುಂಪು ಸೇರುವುದರಿಂದ ರೋಗ ಲಕ್ಷಣಗಳಿಲ್ಲದೆಯೇ ಸೋಂಕು ವ್ಯಾಪಿಸುವ ಸಾಧ್ಯತೆಗಳಿದ್ದು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆಯೂ ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಕೊಡಗಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಹವಾಗುಣದ ವ್ಯತ್ಯಾಸ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಶಾಲೆಗಳು ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಅರಿವಿನ ಕೊರತೆ ಇರುವ ಮಕ್ಕಳು ತಮ್ಮ ಇಚ್ಛೆಯಂತೆ ನಡೆದುಕೊಳ್ಳುವುದರಿಂದ ಪತ್ತೆಯಾಗದ ಕೋವಿಡ್ ಸೋಂಕು ಹರಡುವ ಸಾಧ್ಯತೆಗಳೇ ಹೆಚ್ಚು ಎಂದು ಅವರು ತಿಳಿಸಿದ್ದಾರೆ.
ಅತ್ಯಂತ ಸೂಕ್ಷ್ಮ ಹವಾಗುಣದ ಜಿಲ್ಲೆಯಾಗಿರುವ ಕೊಡಗಿನ ಮಟ್ಟಿಗೆ ಇನ್ನೂ 15 ದಿನ ಕಾದು ನೋಡುವ ತಂತ್ರವನ್ನು ಅನುಸರಿಸಬೇಕು. ಮುಂದೆ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ಅ.1 ರ ನಂತರ ಶಾಲೆಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೋವಿಡ್ ಸಂದಿಗ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿದೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕೂಡ ಇರುವುದಿಲ್ಲ. ಈ ವಿದ್ಯಾರ್ಥಿಗಳು ಜೀಪ್, ಆಟೋರಿಕ್ಷಾ ಮತ್ತಿತರ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದ್ದು, ಇಲ್ಲಿಯೂ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದೆ ಸೋಂಕು ಹರಡುವ ಭೀತಿ ಎದುರಾಗಲಿದೆ. ಆದ್ದರಿಂದ ಶಿಕ್ಷಣದ ಅವಶ್ಯಕತೆಯೊಂದಿಗೆ ಮಕ್ಕಳ ಆರೋಗ್ಯದ ಹಿತದೃಷ್ಟಿಯನ್ನು ಕೂಡ ಜಿಲ್ಲಾಡಳಿತ ಗಮನಿಸಬೇಕಾಗಿದೆ ಎಂದು ಮನ್ಸೂರ್ ಆಲಿ ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss