Sunday, July 3, 2022

Latest Posts

ಕೊಡಗಿನಲ್ಲಿ ಮುಂದುವರಿದ ವರುಣನ ಅಬ್ಬರ: ಅಲ್ಲಲ್ಲಿ ಪ್ರವಾಹ ಭೂಕುಸಿತ-ಸಂಚಾರ ಅಸ್ತವ್ಯಸ್ತ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಶುಕ್ರವಾರವೂ ಮುಂದುವರಿದಿದ್ದು, ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ಕೆಲವು ಪ್ರದೇಶಗಳಿಗೆ ಸಂಪರ್ಕ ಕಡಿತಗೊಂಡಿದೆ.
ಮಡಿಕೇರಿ ತಾಲೂಕಿನಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಮಕ್ಕಂದೂರು ಸಮೀಪದ ಹೊದಕಾನ-ಆವಂಡಿ ರಸ್ತೆಗೆ ಬೃಹತ್ ಬರೆ ಕುಸಿದಿದೆ. ಇದರಿಂದಾಗಿ ರಸ್ತೆ ತುಂಬಾ ಮಣ್ಣಿನ ರಾಶಿ ಆವರಿಸಿದ್ದು ಸಂಚಾರ ಸ್ಥಗಿತಗೊಂಡಿದೆ. ಹಟ್ಟಿಹೊಳೆ-ಮುಕ್ಕೋಡ್ಲು ತಂತಿಪಾಲ ವ್ಯಾಪ್ತಿಯಲ್ಲೂ ಬರೆ ಕುಸಿದು ಸಂಚಾರ ಸ್ಥಗಿತವಾಗಿದ್ದು, ಹೊಳೆಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ವಿಷಯ ತಿಳಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸ್ಥಳಕ್ಕೆ ಭೇಟಿ ನೀಡಿದ್ದು, ಜೆಸಿಬಿ ಯಂತ್ರದ ಮೂಲಕ ಮಣ್ಣು ತೆರವು ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿದ್ದಾರೆ.
ಕಾವೇರಿ ನದಿಯಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಭಾಗಮಂಡಲ-ನಾಪೋಕ್ಲು ರಸ್ತೆಯ ಮೇಲೆ ಮೂರು ಅಡಿಗಳಷ್ಟು ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಅತ್ತ ನಾಪೋಕ್ಲು ಸಮೀಪದ ಕುಂಜಿಲ ಪೈನರಿ ಜುಮ್ಮಾ ಮಸೀದಿಗೆ ತೆರಳುವ ರಸ್ತೆ ಜಲಾವೃತವಾಗಿದ್ದು, ಅಯ್ಯಂಗೇರಿಯಲ್ಲಿ ಮನೆಯೊಂದರ ಮೇಲೆ ಬರೆ ಕುಸಿದು ಹಾನಿ ಸಂಭವಿಸಿದೆ.
ಬೇತ್ರಿಯಲ್ಲೂ ಕಾವೇರಿ ನದಿ ನೀರಿನ ಹರಿವು ಹೆಚ್ಚಾಗಿದ್ದು, ಸ್ಥಳಕ್ಕೆ ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ನದಿ ಪಾತ್ರದಲ್ಲಿರುವ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುಗವಂತೆ ಸೂಚನೆ ನೀಡಿದ್ದಾರೆ.
ದಕ್ಷಿಣಕೊಡಗಿನಲ್ಲೂ ಉತ್ತಮ ಮಳೆಯಾಗುತ್ತಿದ್ದು, ಲಕ್ಷ್ಮಣತೀರ್ಥ ಉಕ್ಕಿ ಹರಿಯುತ್ತಿದೆ. ಕಾನೂನು-ನಿಟ್ಟೂರು ಮಾರ್ಗ ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ಅಡಚರಣೆಯಾಗಿದೆ.
ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 97.52 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 108.88 ಮಿ.ಮೀ., ವೀರಾಜಪೇಟೆ ತಾಲೂಕಿನಲ್ಲಿ 97.54 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 86.13 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 69.40, ನಾಪೋಕ್ಲು 147.20, ಸಂಪಾಜೆ 53.50, ಭಾಗಮಂಡಲ 165.40, ವೀರಾಜಪೇಟೆ ಕಸಬಾ 110.40, ಹುದಿಕೇರಿ 88.85, ಶ್ರೀಮಂಗಲ 176, ಪೊನ್ನಂಪೇಟೆ 92, ಅಮ್ಮತ್ತಿ 50, ಬಾಳೆಲೆ 68, ಸೋಮವಾರಪೇಟೆ ಕಸಬಾ 82, ಶನಿವಾರಸಂತೆ 115.80, ಶಾಂತಳ್ಳಿ 160, ಕೊಡ್ಲಿಪೇಟೆ 75, ಕುಶಾಲನಗರ 22, ಸುಂಟಿಕೊಪ್ಪ 62 ಮಿ.ಮೀ.ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಶುಕ್ರವಾರ ಜಲಾಶಯದ ನೀರಿನ ಮಟ್ಟವನ್ನು 2854.48 ಅಡಿಗಳಿಗೆ ಕಾಯ್ದರಿಸಿಕೊಂಡು ನದಿಗೆ 13,900 ಹಾಗೂ ನಾಲೆಗೆ 103 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ನೀರಿನ ಮಟ್ಟ 2855.48 ಅಡಿಗಳಷ್ಟಿದ್ದರೆ, ಹೊರ ಹರಿವು ನದಿಗೆ ಕೇವಲ 350 ಕ್ಯುಸೆಕ್‍ನಷ್ಟಿತ್ತು.
ಪ್ರಸಕ್ತ ಜಲಾಶಯಕ್ಕೆ 9783 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಒಳಹರಿವು 1402 ಕ್ಯುಸೆಕ್‍ನಷ್ಟಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss