ಮಂಗಳೂರಿನಲ್ಲಿ ಎಬಿವಿಪಿಯಿಂದ ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮೇಳನ ಆರಂಭ

ಹೊಸ ದಿಗಂತ ವರದಿ, ಮಂಗಳೂರು:

ಕಾನೂನು ಪದವೀಧರರು ಕೇವಲ ಪಠ್ಯಕ್ರಮದ ಜ್ಞಾನವನ್ನು ಮಾತ್ರ ಹೊಂದದೇ ವೃತ್ತಿಪರರಾಗಿ ಕಾಲೇಜಿನಿಂದ ಹೊರಬರಬೇಕು. ಪದವಿಯ ಕೊನೆಗೆ ಗ್ರಾಮವೊಂದನ್ನು ದತ್ತು ಪಡೆದು, ಅಲ್ಲಿ ಕಾನೂನು ಸಾಕ್ಷರತೆ ಮೂಡಿಸುವ ‘ಸೋಶಿಯಲ್ ಡಾಕ್ಟರ್’ ಕೆಲಸ ಮಾಡಬೇಕು. ಇದು ಮುಂದಿನ ವೃತ್ತಿ ಬದುಕಿಗೆ ಸಹಾಯಕವಾಗಲಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ, ಮಾಜಿ ಉಪಲೋಕಾಯುಕ್ತ ಸುಭಾಷ್ ಅಡಿ ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ವತಿಯಿಂದ ನಗರದ ಡೊಂಗರಕೇರಿ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ಶುಕ್ರವಾರ ಎರಡು ದಿನಗಳ ಕಾನೂನು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಶಿಕ್ಷಣ ಸಾಂಪ್ರದಾಯಿಕ ಕಲಿಕೆಗೆ ಮಾತ್ರ ಸೀಮಿತವಾಗಬಾರದು. ಪ್ರಸ್ತುತ ನಡೆಯುತ್ತಿರುವ ಬದಲಾವಣೆ, ಬೆಳವಣಿಗೆಗಳನ್ನು ಕಾನೂನು ಅಧ್ಯಯನ ಒಳಗೊಂಡಿರಬೇಕು. 1950ರ ಬಳಿಕ ನಡೆದ ಸಂವಿಧಾನದ ತಿದ್ದುಪಡಿ, ಕಾನೂನಿನ ಬದಲಾವಣೆಗಳು, ಕಾಲ ಕಾಲಕ್ಕೆ ನ್ಯಾಯಾಲಯಗಳು ಹೊರಡಿಸುವ ಆದೇಶಗಳನ್ನು ಗಮನಿಸಿ ಅವುಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಕೇವಲ ಪಠ್ಯದ ವಿಷಯಗಳಿಗೆ ಸೀಮಿತವಾಗದೆ ಪ್ರಚಲಿತ ವಿಚಾರಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ವ್ಯಾಸಂಗ ಮುಗಿಸಿದ ತಕ್ಷಣ ವೃತ್ತಿಪರರಾಗುವ ಸಾಮರ್ಥ್ಯ ಪಡೆಯಬೇಕು. ಕ್ಲಾಸ್‌ರೂಂನಿಂದ ಕೋರ್ಟ್ ರೂಂಗೆ ತೆರಳುವಾಗ ಪ್ರಾಯೋಗಿಕ ಜ್ಞಾನ ಪಡೆದಿರಬೇಕು ಎಂದರು.

ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ನ್ಯಾಯಾಲಯಗಳು ವೇಗವಾಗಿ ಕೆಲಸ ಮಾಡುತ್ತಿವೆ. ನಮ್ಮ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆ ದೃಢವಾಗಿರುವುದರಿಂದ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯೂ ಸ್ಥಿರವಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಎಬಿವಿಪಿ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಅಲ್ಲಮಪ್ರಭು ಗುಡ್ಡ ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರಕ್ಕೆ ನಾಯಕತ್ವ ನೀಡಿದ್ದು ಕಾನೂನು ಕ್ಷೇತ್ರ. ಇಂದಿಗೂ ರಾಷ್ಟ್ರಕ್ಕೆ ನಾಯಕತ್ವ ವಹಿಸುವವರನ್ನು ರೂಪಿಸುವ ಜವಾಬ್ದಾರಿ ಈ ಕ್ಷೇತ್ರಕ್ಕಿದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಎಬಿವಿಪಿ ೭೫ ಸರಕಾರಿ ಶಾಲೆಗಳನ್ನು ನವೀಕರಣ ಮಾಡುವ ಕಾರ್ಯ ಕೈಗೆತ್ತಿಕೊಳ್ಳಲಿದೆ. ಐಐಟಿಯಂತಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ‘ಥಿಂಕ್ ಇಂಡಿಯಾ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಎಬಿವಿಪಿ ರಾಜ್ಯಾಧ್ಯಕ್ಷ ಡಾ. ರೋಹಿಣಾಕ್ಷ ಶಿರ್ಲಾಲು ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾನೂನು ಪರಿಣಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ದೇಶದ ಸ್ವಾತಂತ್ರ್ಯ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಕಾನೂನು ತಜ್ಞರು ದೊಡ್ಡ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಸಾಮಾನ್ಯ ಮನುಷ್ಯನಿಗೂ ಕಾನೂನಿನ ಸೇವೆ ಸಿಗಬೇಕು ಎಂಬ ನೆಲೆಯಲ್ಲಿ ಇಂತಹಾ ಸಮ್ಮೇಳನ ಆಯೋಜಿಸಲಾಗಿದೆ. ಎಬಿವಿಪಿ ವತಿಯಿಂದ ವೈದ್ಯಕೀಯ, ಇಂಜಿನಿಯರಿಂಗ್, ಐಐಟಿಯಂತಹ ಸಂಸ್ಥೆಗಳ ವಿದ್ಯಾರ್ಥಿಗಳ ಸಮ್ಮೇಳವನ್ನೂ ನಡೆಸಲಾಗುತ್ತಿದೆ ಎಂದರು.

ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನ ನಿರ್ದೇಶಕ ಡಾ. ಬಿ.ಕೆ.ರವೀಂದ್ರ ಮುಖ್ಯ ಅತಿಥಿಯಾಗಿದ್ದರು. ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರೇಮಶ್ರೀ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ‘ಸಂವಿಧಾನ ಶಿಲ್ಪಿ, ಜ್ಞಾನಯೋಗಿ ಡಾ. ಬಿ.ಆರ್. ಅಂಬೇಡ್ಕರ್’ ಎಂಬ ಮರುಮುದ್ರಣಗೊಂಡ ಪುಸ್ತಕ ಬಿಡುಗಡೆ ಮತ್ತು ಎಬಿವಿಪಿ ಮೂರನೇ ಆವೃತ್ತಿಯ ವಿದ್ಯಾರ್ಥಿ ಸಂಸ್ಕೃತಿ ಚಳುವಳಿಯ ಪೋಸ್ಟರ್ ಅನಾವರಣಗೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!