Monday, August 8, 2022

Latest Posts

ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ 1659 ಕೋ.ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನ

ಹೊಸ ದಿಗಂತ ವರದಿ, ಮಂಗಳೂರು:

ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ 1659 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ರಾಜ್ಯದ ಆರು ಸ್ಮಾರ್ಟ್ ಸಿಟಿ ಪೈಕಿ ಯೋಜನೆ ಜಾರಿಯಲ್ಲಿ ಮಂಗಳೂರು ಮುಂಚೂಣಿಯಲ್ಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಉರ್ವ ಮಾರುಕಟ್ಟೆ ಬಳಿ 20.54 ಕೋಟಿ ರೂ. ವೆಚ್ಚದ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ಒಳಗೊಂಡ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಹಾಗೂ ಹಂಪನಕಟ್ಟೆ ಹಳೆ ಬಸ್ ನಿಲ್ದಾಣ ಬಳಿ 70 ಕೋಟಿ ರೂ. ವೆಚ್ಚದ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ನಗರದ ಪುರಭವದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ 44.79 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. 66 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. 34.50 ಕೋಟಿ ರೂ. ವೆಚ್ಚದ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಆದಾಯ ಉತ್ಪನ್ನಗೊಂಡು 20 ವರ್ಷದೊಳಗೆ 20 ಸಾವಿರ ಕೋಟಿ ರೂ. ಮೊತ್ತದ ವ್ಯವಹಾರಗಳು ನಡೆಯಲಿವೆ ಎಂದರು.
ಅಮೆರಿಕಾ ಸಹಿತ ವಿದೇಶಗಳ ನಗರಗಳಂತೆ ನಮ್ಮ ದೇಶದ ನಗರಗಳೂ ಪಾರಂಪರಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಮಾರ್ಟ್ ಸಿಟಿ ಪರಿಕಲ್ಪನೆ ಸಾಕಾರಗೊಳಿಸುತ್ತಿದ್ದಾರೆ. ಸ್ಮಾರ್ಟ್ ಸಿಟಿ ಮೂಲಕ ಮಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳು ವೇಗದಿಂದ ನಡೆಯುತ್ತಿವೆ. ಈಗಾಗಲೇ ಕದ್ರಿ ಪಾರ್ಕ್, ಹಂಪನಕಟ್ಟೆ ಪ್ರದೇಶ ಅಭಿವೃದ್ಧಿಯಾಗುತ್ತಿದೆ. ಮುಂದಕ್ಕೆ ಫಲ್ಗುಣಿ ನದಿ ತೀರದಲ್ಲಿ ವಾಟರ್ ಫ್ರಂಟ್ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಉರ್ವದ ಒಳಾಂಗಣ ಕ್ರೀಡಾಂಗಣ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಳುಗಳಿಗೆ ನೆರವಾಗಲಿದೆ ಎಂದು ನಳಿನ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರಿಗೆ ಸ್ಮಾರ್ಟ್ ಸಿಟಿ ಹಾಗೂ ಅಮೃತ್ ಯೋಜನೆ ಎರಡೂ ದೊರೆತಿದೆ. ಈ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ನಿರ್ದಿಷ್ಟ ಮಾನದಂಡಕ್ಕೆ ಅನುಗುಣವಾಗಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ನಡೆಯುತ್ತಿವೆ. ಆದರೂ, ಕೆಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ನಗರದ ಅಭಿವೃದ್ಧಿಗೆ ಅಡ್ಡಿ ಉಂಟುಮಾಡುವುದು ಸರಿಯಲ್ಲ ಎಂದರು.
ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಮಂಗಳೂರಿನಲ್ಲಿ ವೇಗವಾಗಿ ನಡೆಯುತ್ತಿದ್ದು, 2025ರ ವೇಳೆಗೆ ಮಂಗಳೂರಿನ ಚಿತ್ರಣ ಬದಲಾಗಲಿದೆ. ಬಸ್ ಕಮಾಂಡ್ ಕಂಟ್ರೋಲ್ ವ್ಯವಸ್ಥೆ ಶೀಘ್ರ ಅನುಷ್ಠಾನವಾಗಲಿದೆ. ಮಂಗಳೂರಿನಲ್ಲಿ 11 ಅಂತಸ್ತುಗಳ ಕೇಂದ್ರ ಮಾರುಕಟ್ಟೆ ನಿರ್ಮಾಣವಾಗಲಿದೆ. ರೈಲ್ವೆ ನಿಲ್ದಾಣ ಸಂಪರ್ಕಿಸುವ ಮಿಲಾಗ್ರಿಸ್ ಚರ್ಚ್ ಬಳಿಯ ರಸ್ತೆ ವಿಸ್ತರಣೆ ಮಾಡಲಾಗುವುದು. ರಾಜಕಾಲುವೆಗಳಿಗೆ 65 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವುದನ್ನು ತಪ್ಪಿಸಲಾಗುವುದು ಎಂದು ಕಾಮತ್ ವಿವರಿಸಿದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅತ್ಯಂತ ವೇಗದಿಂದ ನಡೆಯುತ್ತಿವೆ. ಇದರ ಪ್ರಯೋಜನ ಮುಂದಿನ ದಿನಗಳಲ್ಲಿ ನಾಗರಿಕರಿಗೆ ಲಭ್ಯವಾಗಲಿದೆ. ನಗರದ 13 ಶಾಲೆಗಳನ್ನು ಉನ್ನತೀಕರಿಸಿ ಸ್ಮಾರ್ಟ್ ಶಾಲೆಗಳಾಗಿ ರೂಪಿಸಲಾಗಿದೆ. ವಾಟರ್ ಫ್ರಂಟ್ ಯೋಜನೆ ಡಿಪಿಆರ್ ಹಂತದಲ್ಲಿದೆ ಎಂದರು.
ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮನಪಾ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೇಶ್ ಬೊಳ್ಳಾಜೆ, ಸಂದೀಪ್ ಗರೋಡಿ, ಲೀಲಾವತಿ ಪ್ರಕಾಶ್, ಶೋಭಾ ರಾಜೇಶ್, ಮನಪಾ ಸ್ಥಳೀಯ ಸದಸ್ಯರಾದ ಪೂರ್ಣಿಮಾ, ದಿವಾಕರ ಪಾಂಡೇಶ್ವರ, ಮನಪಾ ಆಯುಕ್ತ ಅಕ್ಷಿ ಶ್ರೀಧರ್, ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್ ಪ್ರಭ, ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಸುಪ್ರೀತ್ ಆಳ್ವ, ವಾಸ್ತುಶಿಲ್ಪಿಗಳಾದ ನೆಲ್ಸನ್ ಪಾಯಸ್, ಕುಮಾರಚಂದ್ರಉಪಸ್ಥಿತರಿದ್ದರು.
ಸ್ಮಾರ್ಟ್ ಸಿಟಿ ಎಂಡಿ ಪ್ರಶಾಂತ್ ಕುಮಾರ್ ಮಿಶ್ರಾ ಸ್ವಾಗತಿಸಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss