Monday, July 4, 2022

Latest Posts

ಗಣಿನಾಡಲ್ಲಿ ಕೋವಿಡ್-19 ಎರಡನೇ ಅಲೆಯ ಕಡಿವಾಣಕ್ಕೆ ಜಿಲ್ಲಾಧಿಕಾರಿಗೆ ಮನವಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………

ಹೊಸ ದಿಗಂತ ವರದಿ, ಬಳ್ಳಾರಿ:

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೋವೀಡ್ ಎರಡನೇ ಅಲೆ ಅರ್ಭಟ ಜೋರಾಗಿದ್ದು, ನಿತ್ಯ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ನಾಗರಿಕರು ನಿತ್ಯ ಆತಂಕದಲ್ಲೇ ದಿನಗಳನ್ನು ಮುಂದೂಡುತ್ತಿದ್ದು, ಕೂಡಲೇ ಈ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ಪರಿಶಿಷ್ಟ ಜಾತಿ ಯುವಜನ ಸಮಾಜ ಪದಾಧಿಕಾರಿಗಳು ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟೆ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವಜನ ಸಮಾಜದ ಕಾರ್ಯಾಧ್ಯಕ್ಷ ಡಿ.ವಿಜಯಕುಮಾರ್ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರ ಚೈನ್ ಲಿಂಕ್ ನನ್ನು ಕಟ್ ಮಾಡಿ, ಜಿಲ್ಲೆಯ ನಾಗರಿಕರ ನೆಮ್ಮದಿ ಕಾಪಾಡಬೇಕು, ನಿತ್ಯ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಬಲಿಯಾಗುತ್ತಿದ್ದಾರೆ, ಈ ಕುರಿತು ಜಿಲ್ಲಾಡಳಿತ ಗಮನಕ್ಕಿದ್ದರೂ ಇಲ್ಲಿವರಗೆ ಅಗತ್ಯ ಕ್ರಮಗೈಗೊಳ್ಳುತ್ತಿಲ್ಲ, ಸ್ಥಿತಿವಂತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೇ, ಬಡ ಜನರು, ಮಧ್ಯಮ ವರ್ಗದವರ ಸ್ಥಿತಿ ಏನು ಎಂಬುದರ ಬಗ್ಗೆ ಆಲೋಚಿಸಬೇಕು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗುಣಮಟ್ಟವಿರೋಲ್ಲ ಎನ್ನುವ ಆರೋಪಗಳಿವೆ, ಸ್ಥಿತಿವಂತರು ಲಕ್ಷಾಂತರ ರೂ.ಖರ್ಚು ಮಾಡಿ ಖಾಸಗಿ ಆಸ್ಪತ್ರೆ‌ ಮೊರೆ ಹೋಗುತ್ತಿದ್ದಾರೆ. ಆದರೇ, ಬಡ‌ಜನರ ಪಾಡೇನು, ಅವರಲ್ಲಿ ಲಕ್ಷಾಂತರ ರೂ.ಖರ್ಚು ಮಾಡಲು ಆಗುತ್ತಿಲ್ಲ, ಕೂಡಲೇ ಜಿಲ್ಲಾಡಳಿತ ಎಲ್ಲ ವರ್ಗದವರಿಗೂ ಗುಣಮಟ್ಟದ ಚಿಕಿತ್ಸೆ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಎಲ್ಲ ಆಸ್ಪತ್ರೆಗಳಲ್ಲಿ ಬೆಡ್ ಗಳ ವ್ಯವಸ್ಥೆ, ಆಕ್ಸಿಜನ್ ಸರಬರಾಜು ಸೇರಿದಂತೆ ಕೊರೋನಾ ಸೋಂಕಿನ ಹರಡುವಿಕೆಗೆ ಕಡಿವಾಣ ಹಾಕಬೇಕು, ಅಗತ್ಯ ಬಿದ್ದರೇ ರೋಗಿಗಳ ಸೇವೆ ಮಾಡಲು ನಮ್ಮ ಸಂಸ್ಥೆಯ ಯುವಕರ ತಂಡ ರೆಡಿ ಇದ್ದು, ಅನುಮತಿ‌ ನೀಡಿದರೇ ಸೇವೆ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ವಿಜಯನಗರ ಜಿಲ್ಲೆಗೆ ಸೀಮಿತರಾಗಿದ್ದರೆ. ಕೊರೋನಾ ಅರ್ಭಟಕ್ಕೆ ಜಿಲ್ಲೆ ಜನರು ತತ್ತರಿಸಿದ್ದು, ಸಾವಿನ‌ ಮನೆಯಾಗಿದೆ. ಸಚಿವರು ನೆಪಕ್ಕೆ‌ ನಗರಕ್ಕೆ ಹವಾನಿಯಂತ್ರಿತ ಕೊಠಡಿಯಲ್ಲಿ ‌ಕುಳಿತು ಸಭೆ‌ ನಡೆಸಿದರೇ ಕೊರೋನಾ ಅಬ್ಬರ ಕಡಿಮೆಯಾಗೊಲ್ಲ, ಸ್ಥಳಕ್ಕೆ ತೆರಳಿ ವಾಸ್ತವಾಂಶ ಅರಿತರೇ ಜನರು ಎದುರಿಸುತ್ತಿರುವ ಸಮಸ್ಯೆಗಳು ಕಣ್ಣಿಗೆ ಬರಲಿವೆ, ಟ್ರಾಮಾಕೇರ್ ಸೆಂಟರ್, ವಿಮ್ಸ್, ಜಿಲ್ಲಾಸ್ಪತ್ರೆ ಸೇರಿದಂತೆ ಯಾವುದೇ ಆಸ್ಪತ್ರೆಗಳಲ್ಲಿ ಬೆಡ್ ಗಳು ದೊರೆಯುತ್ತಿಲ್ಲ, ಪ್ರಶ್ನಿಸಿದರೇ ಖಾಲಿ‌ ಇಲ್ಲ‌ ಎನ್ನುವ ಉತ್ತರ ಸಾಮಾನ್ಯವಾಗಿದೆ. ಸಚಿವ ಆನಂದ್ ಸಿಂಗ್ ಅವರು ಕೂಡಲೇ‌ ಬಳ್ಳಾರಿಯ ಕೋವೀಡ್‌ಕೇರ್ ಸೆಂಟರ್ ಗೆ‌ ಭೇಟಿ‌ ನೀಡಬೇಕು, ಅಂದಾಗ‌ ಮಾತ್ರ ಜನರ ಸಮಸ್ಯೆ ಅರಿವಾಗಲಿದೆ. ಹೊಸಪೇಟೆ ಕಚೇರಿಯಲ್ಲಿ ಉಳಿದು ಅಧಿಕಾರಿಗಳು ಹೇಳುವ ಸುಳ್ಳು ಅಂಕಿ ಅಂಶಗಳನ್ನು ಪಡೆದು, ಜಿಲ್ಲೆಯಲ್ಲಿ ಬೆಡ್ ಗಳ ಕೊರತೆಯಿಲ್ಲ, ಆಕ್ಸಿಜನ್ ಕೊರತೆ ಇಲ್ಲ ಎನ್ನುವದನ್ನು ಕೈಬಿಟ್ಟು ಬಳ್ಳಾರಿ ಸೇರಿದಂತೆ ಜಿಲ್ಲೆಯಲ್ಲಿರುವ ಆಸ್ಪತ್ರೆಗಳಿಗೆ‌ ಭೇಟಿ ನೀಡಿ ಕೊರೋನಾ ಚೈನ್‌ಲಿಂಕ್ ನ್ನು ಕಟ್ ಮಾಡಲು‌ ಮುಂದಾಗಬೇಕು, ಸೋಂಕಿತರಿಗೆ ಅಗತ್ಯ ವ್ಯವಸ್ಥೆ ಹಾಗೂ ಗುಣಮಟ್ಟದ ಚಿಕಿತ್ಸೆ ಕಲ್ಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಯುವಜನ ಸಮಾಜದ ಜಿಲ್ಲಾಧ್ಯಕ್ಷ ಪಿ.ರಾಮಕೃಷ್ಣ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆ ಹೊಡೆತಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ, ನಿತ್ಯ ಸಾವು,‌ ನೋವುಗಳು ಸಂಭವಿಸುತ್ತಿವೆ. ಇದರ ಚೈನ್ ಲಿಂಕ್ ಕಟ್‌ ಮಾಡಿ ಕೊರೋನಾ ಹೆಡಮುರಿ‌ ಕಟ್ಟಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಿವಿಧ ಮುಖಂಡರು ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss