ಭದ್ರತಾ ದೃಷ್ಟಿಯಿಂದ ರಷ್ಯಾದಲ್ಲಿರುವ ಅಮೆರಿಕನ್ನರು ಕೂಡಲೇ ಹಿಂದಿರುಗಿ: ಯುಎಸ್ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇನೆಯನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಘೋಷಿಸುತ್ತಿದ್ದಂತೆ, ಆ ದೇಶದಲ್ಲಿರುವ ತನ್ನ ನಾಗರಿಕರಿಗೆ ಅಮೆರಿಕ ಪ್ರಮುಖ ಸಂದೇಶವನ್ನು ನೀಡಿದೆ. ಅಲ್ಲಿರುವ ಅಮೆರಿಕನ್ನರು ತಕ್ಷಣ ರಷ್ಯಾವನ್ನು ತೊರೆಯಬೇಕು ಎಂದು ಸೂಚನೆ ನೀಡಿದೆ. ಉಕ್ರೇನ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಮೂರು ಲಕ್ಷ ಜನರೊಂದಿಗೆ ಭಾಗಶಃ ಸೇನಾ ಸಜ್ಜುಗೊಳಿಸುವುದಾಗಿ ಪುಟಿನ್ ಘೋಷಿಸಿರುವುದು ಗೊತ್ತೇ ಇದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ತಮ್ಮ ಪ್ರದೇಶಗಳನ್ನು ರಕ್ಷಿಸಿರುವುದರ ಜೊತೆಗೆ ಪಶ್ಚಿಮಾತ್ಯ ದೇಶಗಳನ್ನು ಎದುರಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪುಟಿನ್  ಸ್ಪಷ್ಟನೆ ನೀಡುತ್ತಾ ಮಿಲಿಟರಿ ಸಜ್ಜುಗೊಳಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಈ ವಿಚಾರ ತಿಳಿಯುತ್ತಿದ್ದಂತೆ ರಷ್ಯಾದಲ್ಲಿರುವ ವಿದೇಶಿಯರು ಈ ಬಗ್ಗೆ ಚಿಂತಿತರಾಗಿದ್ದಾರೆ. ಹಾಗಾಗಿ ರಷ್ಯಾದ ಜನ ಸೇರಿದಂತೆ ವಿದೇಶಿಗರು ಕೂಡಾ ದೇಶವನ್ನು ತೊರೆಯಲು ಮುಂದಾಗಿದ್ದು, ಗಡಿಗಳಲ್ಲಿನ ಚೆಕ್ ಪೋಸ್ಟ್‌ಗಳು ಜನರಿಂದ ಕಿಕ್ಕಿರಿದಿವೆ. ಈ ಬೆಳವಣಿಗೆಗಳ ನಡುವೆ ಅಮೆರಿಕದ ರಾಯಭಾರಿ ಕಚೇರಿಯು ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

ರಷ್ಯಾದಿಂದ ಅಮೆರಿಕಕ್ಕೆ ಹೋಗಲು ಬಯಸುವವರಿಗೆ ರಷ್ಯಾ ಪರವಾನಗಿ ನೀಡವುದು ಅನುಮಾನ. ಹಾಗಾಗಿ ಅಲ್ಲಿಂದ ಬೇರೆ ದೇಶಗಳಿಗೆ ಹೋಗಲು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳುವಂತೆ ಸೂಚಿಸಿದೆ. ಈ ನಡುವೆ ರಷ್ಯಾದಲ್ಲಿ ವಿಮಾನ ಟಿಕೆಟ್‌ಗಳ ಬೆಲೆಗಳು ಗಗನಕ್ಕೇರುತ್ತಿವೆ.

ರಷ್ಯಾದಲ್ಲಿ ಮಾರ್ಷಲ್ ಲಾ ಹೇರುವ ಸಾಧ್ಯತೆಯಿದೆ ಎಂದು ಆ ದೇಶದ ನಾಗರಿಕರು ಭಯಭೀತರಾಗಿದ್ದಾರೆ. ಮಾರ್ಷಲ್ ಲಾ ಹೇರಿದರೆ ಇಡೀ ಸರಕಾರಿ ಆಡಳಿತ ಸೇನೆಯ ಹಿಡಿತದಲ್ಲಿದ್ದು ತುರ್ತು ಪರಿಸ್ಥಿತಿ ಎದುರಾಗಲಿದೆ. ಪುಟಿನ್ ಉಕ್ರೇನ್‌ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದಾಗಿನಿಂದ, ರಷ್ಯಾ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ವಿಮಾನಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!