ಜೈಲಿನಲ್ಲಿ ಸಿಧುಗೆ ಸಿಕ್ಕಿದೆ ‘ಗುಮಾಸ್ತ ಕೆಲಸ ’

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪಾರ್ಕಿಂಗ್ ಗಲಾಟೆಯೊಂದರಲ್ಲಿ ವೃದ್ಧರೊಬ್ಬರನ್ನು ಥಳಿಸಿ ಅವರ ಸಾವಿಗೆ ಕಾರಣವಾಗಿ ಇದೀಗ ಜೈಲು ಶಿಕ್ಷೆಗೆ ಗುರಿಯಾಗಿರುವ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರಿಗೆ ಇದೀಗ ಜೈಲಿನಲ್ಲಿ ‘ಗುಮಾಸ್ತ ಕೆಲಸ ’ ಲಭಿಸಿದೆ.
1988ರ ಡಿ.27ರಂದು ಪಾಟಿಯಾಲದಲ್ಲಿ ಪಾರ್ಕಿಂಗ್ ರಂಪಾಟವೊಂದರಲ್ಲಿ ಸಿಗ್ನಲ್‌ನಲ್ಲಿ ರಸ್ತೆಗಡ್ಡವಾಗಿ ನಿಂತಿದ್ದ ತನ್ನ ಜಿಪ್ಸಿ ವಾಹನವನ್ನು ತೆಗೆಯುವಂತೆ ಕೇಳಿದ್ದ ಗುರ್ನಾಮ್ ಸಿಂಗ್ ಎಂಬ ವೃದ್ಧನನ್ನು ಅವರ ಕಾರಿನಿಂದ ಎಳೆದುಹಾಕಿದ್ದ ಸಿಧು , ತನ್ನ ಸ್ನೇಹಿತ ರೂಪಿಂದರ್ ಸಿಂಗ್ ಜೊತೆಗೂಡಿ ವೃದ್ಧನಿಗೆ ಥಳಿಸಿದ್ದರು. ಗುರ್ನಾಮ್ ಸಿಂಗ್ ಅನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇದೀಗ ಸರ್ವೋಚ್ಚ ನ್ಯಾಯಾಲಯ 34ವರ್ಷಗಳ ಬಳಿಕ ಸಿಧುಗೆ ಮೇ 19ರಂದು ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಸಿತ್ತು.ಸಿಧು ಈಗ ಪಾಟಿಯಾಲದ ಸೆಂಟ್ರಲ್ ಜೈಲಿನಲ್ಲಿರುವ ಸಿಧು ಬರಾಕ್ ನಂ.10ರಲ್ಲಿದ್ದು, ಕೈದಿ ನಂ.1376839ನೀಡಲಾಗಿದೆ.
ಜೈಲಿನಲ್ಲಿ ಸಿಧುಗೆ ಗುಮಾಸ್ತ ಕೆಲಸ ನೀಡಲಾಗಿದೆ. ಆದರೆ ಇತರ ಕೈದಿಗಳು ಒಂದೆಡೆ ಕೂಡಿ ಕೆಲಸ ಮಾಡುತ್ತಾರಾದರೆ, ಭದ್ರತೆಯ ಕಾರಣದಿಂದಾಗಿ ಸಿಧುಗೆ ‘ವರ್ಕ್ ಫ್ರಂ ಸೆಲ್’ ಅವಕಾಶ ನೀಡಲಾಗಿದೆ.ಇದರಿಂದ ಜೈಲಿನಲ್ಲಿರುವ ತನ್ನ ಕೋಣೆಯಿಂದಲೇ ಸಿಧುಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ.ಆದರೆ ಜೈಲಿನ ನಿಯಮದಂತೆ ಮೂರು ತಿಂಗಳ ಕಾಲ ಸಿಧುಗೆ ವೇತನ ಇರುವುದಿಲ್ಲ. ಅನಂತರ ಸಿಧು ಕೆಲಸ ನೋಡಿಕೊಂಡು ಕೈದಿ ಕುಶಲನೇ, ಅರೆಕುಶಲಿಯೇ ಅಥವಾ ಕೌಶಲವಿಲ್ಲದವನೇ ಎಂಬುದನ್ನು ನಿರ್ಧರಿಸಬೇಕಾಗಿದ್ದು, ಅನಂತರ ದಿನಕ್ಕೆ 30ರಿಂದ 90ರೂ.ವರೆಗೆ ವೇತನ ಲಭಿಸಲಿದೆ.ಇದಕ್ಕೂ ಮುನ್ನ ಸಿಧುವಿಗೆ ತರಬೇತಿ ನೀಡಲಾಗುವುದು. ಮಂಗಳವಾರದಿಂದಲೇ ಸಿಧು ಕೆಲಸ ಆರಂಭಿಸಿದ್ದಾಗಿ ಜೈಲು ಮೂಲಗಳು ತಿಳಿಸಿವೆ.
ವಿಶೇಷವೆಂದರೆ , ಮಾದಕದ್ರವ್ಯ ವ್ಯಸನಿಗಳು, ಕಳ್ಳಸಾಗಣೆದಾರರು, ಕ್ರಿಮಿನಲ್‌ಗಳು ಇದೇ ಜೈಲಿನಲ್ಲಿದ್ದು, ಮಾದಕದ್ರವ್ಯ ಚಟುವಟಿಕೆ ವಿರುದ್ಧ ಸಿಧು ಧ್ವನಿ ಎತ್ತಿದ್ದು, ಇದರಿಂದ ಅವರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ನೀಡಲಾಗಿದೆ.ಮೊದಲ ದಿನ ರಾತ್ರಿ ಊಟ ಮಾಡದ ಸಿಧುಗೆ ಮುಂದಿನ ದಿನಗಳಲ್ಲಿ ವೈದ್ಯರ ಸಲಹೆಯಂತೆ ಪಥ್ಯದ ಆಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ.ನ್ಯಾಯಾಲಯ ತೀರ್ಪು ಪ್ರಕಟಿಸುವ ವೇಳೆ ಸಿಧು ಇಂಧನ ಬೆಲೆ ಏರಿಕೆ ವಿರುದ್ಧ ಆನೆಯನ್ನು ಏರಿ ಪ್ರತಿಭಟಿಸುತ್ತಿದ್ದರು. ಮರು ದಿನ ನ್ಯಾಯಾಲಯದ ಮುಂದೆ ಶರಣಾಗಿದ್ದರು.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!