ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
ಹೊಸ ದಿಗಂತ ವರದಿ, ಮೈಸೂರು:
ಕೆಲವು ರಾಜ್ಯಗಳ ಮುಂದೆ ನಡೆಯುವ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಸಂಘಟನಾ ದೃಷ್ಟಿಯಿಂದ ಪಕ್ಷದ ವರಿಷ್ಠರು ಕೆಲವು ಹಿರಿಯ ಸಚಿವರ ರಾಜಿನಾಮೆ ಕೇಳಿದ್ದರಿಂದ ನಾವೆಲ್ಲ ತಕ್ಷಣ ರಾಜೀನಾಮೆ ನೀಡಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.
ಮಂಗಳವಾರ ಸಂಜೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಅವರು, ನಾಡಶಕ್ತಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದೆ ಕೆಲವು ರಾಜ್ಯಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹಾಗಾಗಿ ಆ ರಾಜ್ಯಗಳಿಗೆ ಪ್ರಾತಿನಿಧ್ಯ ನೀಡಬೇಕಾಗಿದೆ. ಅಲ್ಲದೇ ಪಕ್ಷದ ಸಂಘಟನೆಗೆ ಹಿರಿಯರನ್ನು ತೊಡಗಿಸಬೇಕಾಗಿದೆ. ಆ ಕಾರಣದಿಂದ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದ ರಾಷ್ಟ್ರಿಯ ಅಧ್ಯಕ್ಷರು ಸೂಚಿಸಿದರು. ಹಾಗಾಗಿ ಪಕ್ಷದ ಸಂಘಟನೆಯ ದೃಷ್ಠಿಯಿಂದ ಸಚಿವ ಸ್ಥಾನಕ್ಕೆ ಹಿರಿಯರು ರಾಜೀನಾಮೆ ನೀಡಿದ್ದೇವೆ ಎಂದು ಹೇಳಿದರು. ದೇಶದಲ್ಲಿ ಬಿಜೆಪಿ ದೊಡ್ಡದಾಗಿ ಬೆಳೆದಿದೆ. ಮೂರು ನಾಲ್ಕು ರಾಜ್ಯಗಳಲ್ಲಿದ್ದ ಬಿಜೆಪಿ ಈಗ ಹದಿಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗ ಜಾಗತಿಕವಾಗಿ ಬೆಳೆದಿದ್ದಾರೆ ಎಂದು ತಿಳಿಸಿದರು.
ರಾಜಕೀಯ ಸಮುದ್ರ ಇದ್ದ ಹಾಗೆ. ಆ ಸಮುದ್ರದಲ್ಲಿ ಸಣ್ಣ ಅಲೆ ಬಂದಾಗ ಸ್ನಾನ ಮಾಡಿಕೊಳ್ಳಬೇಕು, ದೊಡ್ಡ ಅಲೆ ಬಂದಾಗ ಜಾಗೃತರಾಗಿರಬೇಕು. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷ ಹೇಳಿದಾಗ ನಾನು ರಾಜೀನಾಮೆ ನೀಡಿದ್ದೇನೆ ಎಂದರು.
ಕೇAದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಸ್ಥಾನ ಅಥವಾ ಸಿಎಂ ಹುದ್ದೆ ನೀಡಬಹುದೇ? ಎಂಬ ಪ್ರಶ್ನೆಗೆ ದೊಡ್ಡ ಅಥವಾ ಸಣ್ಣ ಸ್ಥಾನ ಕೊಡಬಹುದು. ಯಾವುದನ್ನೇ ಕೊಟ್ಟರೂ ನಾನು ನಿರ್ವಹಿಸುತ್ತೇನೆ. ಪಕ್ಷ ಹೇಳುವ ಕೆಲಸ ಮಾಡುತ್ತೇನೆ ಎಂದರು. ಈ ವೇಳೆ ಶಾಸಕ ಎಲ್.ನಾಗೇಂದ್ರ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್ಕುಮಾರ್ಗೌಡ ಮತ್ತಿತರರು ಉಪಸ್ಥಿತರಿದ್ದರು.