Tuesday, August 9, 2022

Latest Posts

ಕೇಂದ್ರದಲ್ಲಿ ನೂತನ ಸಹಕಾರಿ ಸಚಿವಾಲಯ ಸ್ಥಾಪನೆ ಐತಿಹಾಸಿಕ ಹೆಜ್ಜೆ: ಸಚಿವ ಎಸ್.ಟಿ.ಸೋಮಶೇಖರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸ ದಿಗಂತ ವರದಿ, ಮೈಸೂರು:

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೂತನ ಸಹಕಾರ ಸಚಿವಾಲಯವನ್ನು ಸ್ಥಾಪನೆ ಮಾಡುತ್ತಿರುವುದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ರೈತ ನಮ್ಮ ದೇಶದ ಬೆನ್ನೆಲುಬು. ಹಾಗಾಗಿ ರೈತರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿ ª ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಇದೀಗ ಕೇಂದ್ರದ ಈ ಕ್ರಮದಿಂದ ರೈತಾಪಿ ವರ್ಗ ಮತ್ತು ಸಹಕಾರಿಗಳಿಗೆ ಅನುಕೂಲವಾಗಲಿದ್ದು, ಅವರ ಅಭ್ಯುದಯಕ್ಕೆ ಶ್ರಮಿಸಲು ಪೂರಕವಾಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸುಮಾರು 43 ಸಾವಿರ ಕೋಆಪರೇಟಿವ್ ಸಂಸ್ಥೆಗಳು ಹಾಗೂ 5 ಸಾವಿರ ಸೌಹಾರ್ಧ ಸೊಸೈಟಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, 2.5 ಕೋಟಿ ಮಂದಿ ಸಹಕಾರಿ ಸದಸ್ಯರಿದ್ದಾರೆ. ದೇಶದಲ್ಲಿ ಸುಮಾರು 48 ಕೋಟಿ ಸಹಕಾರಿ ಸದಸ್ಯರುಗಳಿದ್ದಾರೆ. ಈ ಎಲ್ಲರಿಗೂ ಈಗ ಒಂದು ವ್ಯವಸ್ಥೆ ರೂಪುಗೊಂಡಿದ್ದು, ಸಮುದಾಯ ಆಧಾರಿತ ಅಭಿವೃದ್ಧಿಯನ್ನು ಸಹಭಾಗಿತ್ವದ ಜೊತೆಗೆ ಕೊಂಡೊಯ್ಯಲು ಸಹಕಾರಿಯಾದಂತಾಗಿದೆ. ಇದೊಂದು ನಾಗರಿಕ ಕೇಂದ್ರಿತ ಸಹಕಾರಿ ಚಳವಳಿಗೆ ಪೂರಕವಾಗಿ ಕಾರ್ಯನಿರ್ವಹಣೆ ಮಾಡಲು ರಚಿಸಿದಂತಹ ಅದ್ಭುತ ವ್ಯವಸ್ಥೆಯಾಗಿದೆ ಎಂದರು.

ಅಭಿವೃದ್ಧಿ ಪಥಕ್ಕೆ ರಹದಾರಿ ನಡೆ
ನೂತನ ಸಹಕಾರ ಸಚಿವಾಲಯ ಸ್ಥಾಪನೆಯಿಂದ ಅನೇಕ ಉಪಯೋಗಗಳು ಸಾಧ್ಯವಾಗಲಿದೆ. ಇದನ್ನು ನಾನು ಅಭಿವೃದ್ಧಿ ಪಥಕ್ಕೆ ರಹದಾರಿ ಎಂದೇ ವಿಶ್ಲೇಷಿಸುತ್ತೇನೆ. ಸಹಕಾರ ರಂಗಕ್ಕಷ್ಟೇ ಅಲ್ಲದೆ, ಜನಸಾಮಾನ್ಯರಿಗೂ ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಣೆ ಮಾಡುವುದರಿಂದ ಸಹಕಾರ ಕ್ಷೇತ್ರಕ್ಕೆ ಮತ್ತಷ್ಟು ಬಲಬರಲಿದೆ. ಈ ವ್ಯವಸ್ಥೆಯಿಂದ ಇನ್ನು ದೇಶದಲ್ಲಿ ಸಹಕಾರಿ ವಲಯಕ್ಕೆ ಒಂದು ಚೌಕಟ್ಟು ನಿರ್ಮಾಣವಾಗಲಿದೆ. ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿಗಳ ರಚನೆಗೆ ಅನುಕೂಲವಾಗಲಿದೆ.
ಸಹಕಾರ ಸಿದ್ಧಾಂತ ಕಾರ್ಯನಿರ್ವಹಣೆ ಮಾಡುವುದೇ ಎಲ್ಲರನ್ನೂ ಉಳ್ಳವರನ್ನಾಗಿ ಮಾಡಬೇಕು ಎಂಬ ಸದಾಶಯದೊಂದಿಗೆ ಎಂಬುದು ಮುಖ್ಯವಾಗುತ್ತದೆ. ಅಂದರೆ, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ಸಮಾಜದ ಯಾವುದೇ ಒಂದು ವರ್ಗ ಹಿಂದುಳಿಯಬಾರದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಕಾರ ಸಿಗಬೇಕು ಎಂಬ ಮೂಲ ಆಶಯಕ್ಕೆ ಈಗ ಇನ್ನಷ್ಟು ಬಲ ಸಿಕ್ಕಂತಾಗಿದೆ. ಕಾರಣ, ಆಯಾ ರಾಜ್ಯಗಳಲ್ಲಿ ಅಲ್ಲಿಯ ಆಡಳಿತ ದೃಷ್ಟಿಗನುಸಾರವಾಗಿ ಸಹಕಾರ ಇಲಾಖೆಗಳು ಕಾರ್ಯನಿರ್ವಹಣೆ ಮಾಡುತ್ತಿದ್ದವು. ಈಗ ಎಲ್ಲವಕ್ಕೂ ಒಂದು ಚೌಕಟ್ಟು ದೊರೆತಂತೆ ಆಗಲಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗಗಳ ಹಾಗೂ ಮಹಿಳಾ ವರ್ಗದ ಅಭಿವೃದ್ಧಿ ಮತ್ತು ಸಬಲೀಕರಣಕ್ಕೆ ಕೇಂದ್ರ ಸರ್ಕಾರದ ಈ ನಡೆಯಿಂದ ಮತ್ತಷ್ಟು ಬಲ ಬಂದoತಾಗಿದೆ. ಹೀಗಾಗಿ ಸಹಕಾರಿ ವಲಯದಿಂದ ಈ ವಲಯಗಳಿಗೆ ಇನ್ನಷ್ಟು ತಳಮಟ್ಟದಿಂದ ಕಾರ್ಯನಿರ್ವಹಿಸಿ ಸಶಕ್ತರನ್ನಾಗಿಸಲು ಅನುಕೂಲವಾಗಲಿದೆ.
ಇದೆಲ್ಲದರ ಜೊತೆಗೆ ಬಹು-ರಾಜ್ಯ ಸಹಕಾರ ಸಂಘಗಳಿಗೆ ಪ್ರತ್ಯೇಕವಾದ ಆಡಳಿತ ವ್ಯವಸ್ಥೆ, ಕಾನೂನು ಚೌಕಟ್ಟು ರಚನೆಯಾಗುವುದರ ಜೊತೆಗೆ ಕಾನೂನು ನೀತಿಗಳ ರಚನೆಗೆ ಅನುಕೂಲವಾಗಲಿದೆ. ಆದರೆ, ರಾಜ್ಯಗಳಲ್ಲಿ ಆಯಾ ರಾಜ್ಯಗಳ ನಿಯಂತ್ರಣದ ಅಧಿಕಾರಗಳು ಹಾಗೆಯೇ ಇರಲಿದೆ. ಹೀಗಾಗಿ ಸಹಕಾರಿಗಳ ಹಾಗೂ ಜನಹಿತದ ದೃಷ್ಟಿಯಿಂದ ಇದೊಂದು ಉತ್ತಮ ನಡೆ ಎಂದೇ ಹೇಳಬಹುದಾಗಿದೆ ಎಂದರು.
ಕೇಂದ್ರ ಸರ್ಕಾರದಿಂದ ಇನ್ನು ನಮ್ಮ ಇಲಾಖೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ಪಡೆಯುವಲ್ಲಿಯೂ ಸಹ ಇದರಿಂದ ಅನುಕೂಲವಾಗಲಿದೆ. ಹಾಗಾಗಿ ರಾಜ್ಯಗಳಲ್ಲಿ ಮತ್ತಷ್ಟು ಅಭಿವೃದ್ಧಿಯ ಕಾರ್ಯಗಳು ಸಹಕಾರ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಹು-ರಾಜ್ಯ ಸಹಕಾರ ಸಂಘಗಳಿಗೆ ಶಿಸ್ತು
ಸಹಕಾರ ಕ್ಷೇತ್ರ ಎಷ್ಟೇ ಬೃಹದಾಕಾರವಾಗಿ ಬೆಳೆದರೂ ಒಂದು ವ್ಯವಸ್ಥೆಯೊಳಗೆ ಇರಲೇಬೇಕಾಗುತ್ತದೆ. ಬಹು-ರಾಜ್ಯ ಸಹಕಾರ ಸಂಘಗಳು (ಎಂಎಸ್‌ಸಿಎಸ್) ಬೇರೆ ಬೇರೆ ರಾಜ್ಯಗಳ ಜೊತೆಗೆ ವ್ಯವಹಾರಗಳನ್ನು ನಡೆಸುವಾಗ ಅವುಗಳಿಗೆ ಒಂದು ಚೌಕಟ್ಟು, ನೀತಿ-ನಿರೂಪಣೆಗಳು ಎಂಬುದಿರಲಿಲ್ಲ. ಆಯಾ ರಾಜ್ಯಗಳಿಗೂ ಇವುಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ 2000-2001ರಲ್ಲಿ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಈಗ ಇಂಥ ಒಂದು ಸಂಸ್ಥೆಗಳ ಬಲವರ್ಧನೆ ಹಾಗೂ ರಾಜ್ಯಗಳಿಗೂ ಪೂರಕವಾಗಿ ಬೆಂಬಲ ಕೊಡುವ ನಿಟ್ಟಿನಲ್ಲಿ ನೂತನ ಸಚಿವಾಲಯವು ಕಾರ್ಯನಿರ್ವಹಣೆ ಮಾಡಲಿದೆ.

ಮಹಾತ್ಮಾ ಗಾಂಧಿಯವರ ಆಶಯ ಪೂರ್ಣ
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಆಶಯ ಸಹ ಈ ಮೂಲಕ ಪೂರ್ಣಗೊಳ್ಳಲಿದೆ. ‘ಒಂದು ಗ್ರಾಮಕ್ಕೆ ಒಂದು ಸಹಕಾರ ಸಂಘ’ ಎಂಬ ಕಲ್ಪನೆ ಹೊಂದಿದ್ದರು. ಈಗ ನಮ್ಮ ಕೇಂದ್ರ ಸರ್ಕಾರವು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆ ಮಾಡುವ ಮೂಲಕ ಆ ಒಂದು ಆಶಯಕ್ಕೆ ನೀರೆರೆದು ಪೋಷಿಸುವ ಕಾರ್ಯಕ್ಕೆ ಚಾಲನೆಯನ್ನು ನೀಡಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss