ಚಿತ್ರದುರ್ಗದಲ್ಲಿ ಭಾರೀ ಮಳೆ : ಧರೆಗುರುಳಿವೆ 53 ಮನೆಗಳು

ಹೊಸ ದಿಗಂತ ವರದಿ, ಚಿತ್ರದುರ್ಗ:

ಕಳೆದ ರಾತ್ರಿ ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ದವಸ ಧಾನ್ಯಗಳು ಹಾಳಾಗಿವೆ. ಅಲ್ಲದೆ ಜಮೀನಿನಲ್ಲಿ ಸಾಕಷ್ಟು ನೀರು ನಿಂತ ಪರಿಣಾಮ ಕಳೆದ ವಾರವಷ್ಟೇ ಬಿತ್ತನೆ ಮಾಡಿದ ಬೆಳೆ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ.
ಬುಧವಾರ ಸಂಜೆ ಜಿಲ್ಲೆಯ ಹಲವೆಡೆ ಪ್ರಾರಂಭಗೊಂಡ ಮಳೆ ಅರ್ಭಟ ರಾತ್ರಿ ಆಗುತ್ತಿದ್ದಂತಲೇ ಹೆಚ್ಚಾಯಿತು. ರಾತ್ರಿಯಿಂದ ಬೆಳಗ್ಗೆವರೆಗೂ ಸುರಿದ ಧಾರಾಕಾರ ಮಳೆಗೆ ಚಿತ್ರದುರ್ಗ ತಾಲ್ಲೂಕಿನ 11 ಮನೆಗಳು ಕುಸಿದು ಬಿದ್ದಿವೆ. ಚಿತ್ರದುರ್ಗ ತಾಲೂಕಿನ ಪಿಳ್ಳೇಕೆರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಸಂಪೂರ್ಣ ಜಲಾವೃತವಾಗಿದೆ. ಪಕ್ಕದಲ್ಲೇ ಇರುವ ಮಲ್ಲಾಪುರ ಕೆರೆಯ ನೀರು ತುಂಬಿಕೊಂಡು ಶಾಲೆಯ ಅಂಗಳ ಕೆರೆಯಂತಾಗಿದೆ.
ಮಳೆ ಗಾಳಿಯ ಅರ್ಭಟಕ್ಕೆ ಶಾಲಾವರಣದಲ್ಲಿದ್ದ ಎರಡು ಮರಗಳು ಸಹ ನೆಲಕ್ಕುರುಳಿವೆ. ಶಿಕ್ಷಕರು ಹಾಗೂ ಮಕ್ಕಳು ಶಾಲೆಯ ಒಳಗೆ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಶಾಲೆಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಶಾಲೆ ಜಲಾವೃತಗೊಳ್ಳುತ್ತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಎದುರಾಗುತ್ತಿದೆ. ಈ ಕುರಿತು ಶಿಕ್ಷಣ ಇಲಾಖೆ, ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಇನ್ನೂ ಕೆರೆಯ ನೀರು ಹೆಚ್ಚಾಗಿ ಹೊರಗಡೆ ಹರಿಯುತ್ತಿರುವುದರಿಂದ ಮಲ್ಲಾಪುರ, ಬೆಳಗಟ್ಟ ಸೇರಿದಂತೆ ಹಲವು ಗ್ರಾಮಗಳ ಜಮೀನಿನಲ್ಲಿ ನೀರು ನಿಂತಿದೆ. ಇದರಿಂದಾಗಿ ಕಳೆದ ವಾರವಷ್ಟೆ ರೈತರು ಬಿತ್ತನೆ ಮಾಡಿದ್ದೆಲ್ಲ ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ಬಿತ್ತನೆ ಬೀಜ, ಗೊಬ್ಬರ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ರೈತರು ಅಳಲು ತೊಡಿಕೊಂಡಿದ್ದಾರೆ.
ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲೂ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 42 ಮನೆಗಳು ಕುಸಿದು ಬಿದ್ದಿವೆ. ತಗ್ಗು ಪ್ರದೇಶಗಲ್ಲಿನ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ವಸ್ತುಗಳೆಲ್ಲ ಮಳೆ ನೀರಿನಲ್ಲಿ ನೆಂದು ಮುದ್ದೆಯಾಗಿವೆ. ಮನೆಗೆ ನುಗ್ಗಿದ್ದ ನೀರನ್ನು ಹೊರ ಹಾಕಲು ಜನರು ರಾತ್ರಿಯಿಡೀ ಹರಸಾಹಸ ಮಾಡುವಂತಾಗಿದೆ.
53 ಮನೆಗಳ ಕುಸಿತ : ಚಿತ್ರದುರ್ಗ ತಾಲ್ಲೂಕಿನಲ್ಲಿ 11 ಮನೆಗಳು ಮಳೆಗೆ ಹಾನಿಯಾಗಿವೆ. ಚಳ್ಳಕೆರೆ ತಾಲ್ಲೂಕಿನಲ್ಲಿ 10 ಮನೆ, ಹಿರಿಯೂರು ತಾಲ್ಲೂಕಿನಲ್ಲಿ 11 ಮನೆ, ಹೊಳಲ್ಕೆರೆ ತಾಲ್ಲೂಕಿನಲ್ಲಿ 11, ಹೊಸದುರ್ಗ ತಾಲ್ಲೂಕಿನಲ್ಲಿ ೨ ಮನೆ ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ೮ ಮನೆಗಳು ಮಳೆಯ ಆರ್ಭಟಕ್ಕೆ ಬಲಿಯಾಗಿವೆ.
ಮಳೆ ವರದಿ : ಚಿತ್ರದುರ್ಗ ಜಿಲ್ಲೆಯಾದ್ಯಂತ ಸರಾಸರಿ 39.3 ಮಿ.ಮೀ. ಮಳೆಯಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ ಅತ್ಯಧಿಕ 62 ಮಿ.ಮೀ., ಮೊಳಕಾಲ್ಮೂರು 40.2 ಮಿ.ಮೀ., ಹಿರಿಯೂರು 39.7 ಮಿ.ಮೀ., ಚಳ್ಳಕೆರೆ ೩೫.೪ ಮಿ.ಮೀ., ಹೊಳಲ್ಕರೆ 33.1 ಮಿ.ಮೀ. ಹಾಗೂ ಹೊಸದುರ್ಗ ತಾಲೂಕಿನಲ್ಲಿ 25.1 ಮಿ.ಮೀ. ಮಳೆಯಾಗಿದೆ.
ಚಿತ್ರದುರ್ಗ- 1 ರಲ್ಲಿ 93.6 ಮಿ.ಮೀ, ಮಳೆಯಾಗಿದ್ದು, ಇದು ಮೇ 18 ರಂದು ಜಿಲ್ಲೆಯ ದಾಖಲಾದ ಅತ್ಯಧಿಕ ಮಳೆಯಾಗಿದೆ. ಉಳಿದಂತೆ ಚಿತ್ರದುರ್ಗ-2 ರಲ್ಲಿ 93 ಮಿ.ಮೀ., ಭರಮಸಾಗರ 48.2 ಮಿ.ಮೀ., ಸಿರಿಗೆರೆ 45.2 ಮಿ.ಮೀ., ತುರುವನೂರು 60.4 ಮಿ.ಮೀ., ಹಿರೇಗುಂಟನೂರು 6.2 ಮಿ.ಮೀ., ಐನಹಳ್ಳಿ 78.2 ಮಿ.ಮೀ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 58.2 ಮಿ.ಮೀ., ಬಬ್ಬೂರು 43 ಮಿ.ಮೀ., ಈಶ್ವರಗೆರೆ 46.2 ಮಿ.ಮೀ., ಇಕ್ಕನೂರು ೪೬.೮ ಮಿ.ಮೀ., ಸುಗೂರು 44.1 ಮಿ.ಮೀ., ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 38 ಮಿ.ಮೀ., ತಳುಕು 31.2 ಮಿ.ಮೀ., ಡಿ.ಮರಿಕುಂಟೆ 35.4 ಮಿ.ಮೀ., ನಾಯಕನಹಟ್ಟಿ 32.8 ಮಿ.ಮೀ., ಪರಶುರಾಮಪುರ 39.4 ಮಿ.ಮೀ., ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 26.2 ಮಿ.ಮೀ., ಬಾಗೂರು 8.5 ಮಿ.ಮೀ., ಮತ್ತೊಡು 12.4 ಮಿ.ಮೀ., ಶ್ರೀರಾಮ್‌ಪುರ 20.0 ಮಿ.ಮೀ., ಮಾಡದಕೆರೆ 58.2 ಮಿ.ಮೀ.,
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 33.8 ಮಿ.ಮೀ, ಬಿ.ದುರ್ಗ 52.4 ಮಿ.ಮೀ, ಹೆಚ್.ಡಿ.ಪುರ 52.8 ಮಿ.ಮೀ, ತಾಳ್ಯ 5.4 ಮಿ.ಮೀ, ರಾಮಗಿರಿ 24.6 ಚಿಕ್ಕಜಾಜೂರು 29.6 ಮಿ.ಮೀ, ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ30.6 ಮಿ.ಮೀ, ಬಿ.ಜಿ ಕೆರೆ 28.8 ರಾಮ್‌ಪುರ 60.1 ಮಿ.ಮೀ, ದೇವಸಮುದ್ರ 58.0 ಮಿ.ಮೀ ರಾಯಪುರ 28.4 ಮಿ.ಮೀ.ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!