ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಆಗ್ತೀನಿ ಎಂದು ನಂಬಿಸಿ ಅತ್ಯಾಚಾರ ನಡೆಸಿ ನಂತರ ಮದುವೆಯಾಗಲ್ಲ, ಆಕೆಗೆ ಕುಜದೋಷವಿದೆ ಎಂದು ಹೇಳಿ ಆರೋಪಿ ಮದುವೆಗೆ ನಿರಾಕರಿಸಿ , ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ (Allahabad HC) ಅತ್ಯಾಚಾರ ಸಂತ್ರಸ್ತೆಗೆ ಕುಜ ದೋಷ ಇದೆಯೇ ಎಂಬುದನ್ನು ನಿರ್ಧರಿಸಲು ಆಕೆಯ ಜಾತಕವನ್ನು ಲಕ್ನೋ ವಿಶ್ವವಿದ್ಯಾನಿಲಯದ (Lucknow University) ಜ್ಯೋತಿಷ್ಯ ವಿಭಾಗಕ್ಕೆ ಕಳುಹಿಸಲು ನಿರ್ದೇಶಿಸಿದೆ.
ಸಂತ್ರಸ್ತೆಗೆ ಕುಜ ದೋಷ ಸಮಸ್ಯೆ ಇದೆಯೇ ಇಲ್ಲವೇ ಎಂಬುದನ್ನು ಹತ್ತು ದಿನಗಳಲ್ಲಿ ಹೇಳಬೇಕು ಎಂದು ಲಕ್ನೋ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥರಿಗೆ ನ್ಯಾಯಮೂರ್ತಿ ಬ್ರಿಜ್ ರಾಜ್ ಸಿಂಗ್ ಆದೇಶಿಸಿದ್ದಾರೆ.ನ್ಯಾಯಾಲಯದ ಆದೇಶದಂತೆ, ಸಂತ್ರಸ್ತ ಬಾಲಕಿ ಮತ್ತು ಆರೋಪಿ ಹುಡುಗ ಲಕ್ನೋ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥರ ಮುಂದೆ ಜಾತಕ ಹಾಜರುಪಡಿಸಲಿದ್ದು, ವಿಭಾಗದ ಮುಖ್ಯಸ್ಥರು ಸಮಸ್ಯೆಯನ್ನು ನಿರ್ಧರಿಸಿ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸಲಿದ್ದಾರೆ.
ಆರೋಪಿಯು ಹುಡುಗಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ. ಬಳಿಕ ಆಕೆಯ ಜಾತಕದಲ್ಲಿ ಕುಜ ದೋಷ ಇದೆ ಎಂದು ಹೇಳಿ ಮದುವೆಯಾಗಲು ನಿರಾಕರಿಸಿದನು. ಯುವತಿಯ ಜಾತಕದಲ್ಲಿ ಕುಜ ದೋಷವಿರುವ ಕಾರಣ ಆರೋಪಿ ಮತ್ತು ಸಂತ್ರಸ್ತೆಯ ನಡುವೆ ವಿವಾಹ ನೆರವೇರಿಸಲು ಸಾಧ್ಯವಿಲ್ಲ ಎಂದು ಆರೋಪಿ ಪರ ವಕೀಲರು ಹೈಕೋರ್ಟ್‌ಗೆ ಹೇಳಿದ್ದಾರೆ.
ಆದ್ರೆ ಸಂತ್ರಸ್ತೆಯ ಪರ ವಕೀಲರು ಯುವತಿಯ ಜಾತಕದಲ್ಲಿ ಕುಜ ದೋಷ ಇಲ್ಲ ಮತ್ತು ಆಕೆ ‘ಮಾಂಗಲಿಕ’ ಅಲ್ಲ ಎಂದಿದ್ದಾರೆ.
ಆರೋಪಿಯು ಮದುವೆಯ ಸುಳ್ಳು ಭರವಸೆಯ ಮೇಲೆ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಅವ ನನ್ನನ್ನು ಮದುವೆಯಾಗುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಸಂತ್ರಸ್ತೆ ವಾದಿಸಿದ್ದಾಳೆ.
ಇದೀಗ ಲಕ್ನೋ ವಿಶ್ವವಿದ್ಯಾಲಯದ ವಿಭಾಗದ ಮುಖ್ಯಸ್ಥರು (ಜ್ಯೋತಿಷ್ಯ ವಿಭಾಗ), ಹುಡುಗಿಗೆ ಕುಜ ದೋಷ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬಹುದು. ಇಂದಿನಿಂದ ಹತ್ತು ದಿನಗಳಲ್ಲಿ ಲಕ್ನೋ ವಿಶ್ವವಿದ್ಯಾಲಯದ ವಿಭಾಗದ ಮುಖ್ಯಸ್ಥ (ಜ್ಯೋತಿಷ್ಯ ವಿಭಾಗ) ಮುಂದೆ ಕಕ್ಷಿದಾರರು ಜಾತಕವನ್ನು ಸಲ್ಲಿಸುತ್ತಾರೆ. ಜೂನ್ 26 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.