Wednesday, August 10, 2022

Latest Posts

ಗೋಕರ್ಣ ಕ್ಷೇತ್ರದಲ್ಲಿ ಮತ್ತೆ ಪೂಜಾ ವಿವಾದ: ಸಂಕಷ್ಟದಲ್ಲಿ ಭಕ್ತರು

ಹೊಸ ದಿಗಂತ ವರದಿ, ಅಂಕೋಲಾ:

ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಾಲಯದ ಪ್ರಮುಖ ಪೂಜಾ ವಿಧಿ ವಿಧಾನಗಳ ಹಕ್ಕಿಗೆ ಸಂಬಂಧಿಸಿದಂತೆ
ಎರಡು ಗುಂಪುಗಳ ನಡುವಿನ ವಿವಾದ ತಾರಕಕ್ಕೇರಿದ್ದು ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಲು ಬಂದ
ಭಕ್ತಾದಿಗಳು ತೊಂದರೆ ಪಡುವಂತಾಗಿದೆ.
ಕೋವೀಡ್ ನಿಯಮಗಳ ಸಡಿಲಿಕೆ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಭಕ್ತರ ಪೂಜಾ ಸೇವೆಗಳಿಗೆ ಅವಕಾಶ ನೀಡಿ ಆದೇಶ ಹೊರಡಿಸಿದ್ದರು.
ಆದರೆ ಆತ್ಮಲಿಂಗದ ಬಳಿ ಕುಳಿತು ಪೂಜೆ ಸಲ್ಲಿಸುವ ಹಕ್ಕಿನ ಕುರಿತಂತೆ ಅರ್ಚಕರ ಎರಡು ಗುಂಪುಗಳ ನಡುವಿನ ಗಲಾಟೆಯಿಂದ ಪೂಜಾ ಕಾರ್ಯ, ಆತ್ಮಲಿಂಗ ಸ್ಪರ್ಷ, ಪ್ರಸಾದ ಮೊದಲಾದ ಸೇವೆಗಳಿಗೆ ಅವಕಾಶ ಸಿಗದೆ ದೂರದ ಊರುಗಳಿಂದ ಬಂದ ಭಕ್ತರು ಮರಳುವಂತಾಗಿದೆ.
ಸಹಾಯಕ ಆಯುಕ್ತರ ಭೇಟಿ
ಗೋಕರ್ಣ ದೇವಾಲಯದ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬರುವ ವರೆಗೆ ನಿವೃತ್ತ ನ್ಯಾಯಮೂರ್ತಿ ಬಿ.ಎಮ್. ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಮೇಲುಸ್ತುವಾರಿ ಸಮಿತಿ ರಚಿಸಲಾಗಿದ್ದು ಕುಮಟಾ ಉಪ ವಿಭಾಗ ಅಧಿಕಾರಿಗಳನ್ನು ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ, ಈ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ರಾಹುಲ್ ರತನ್ ಪಾಂಡೆ ಅವರು ಎರಡು ಗುಂಪುಗಳ ಜೊತೆ ಚರ್ಚೆ ನಡೆಸಿ ಸೆಪ್ಟೆಂಬರ್ 27 ರಂದು ನಿರ್ವಹಣಾ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎಮ್. ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿವಾದದ ವಿಷಯ ಮತ್ತು ಪೂಜಾ ಸೇವೆಗಳ ವಿಷಯ ಚರ್ಚಿಸಲಾಗುವುದು ದೇವಾಲಯದಲ್ಲಿ ಯಾವುದೇ ಗಲಾಟೆಗೆ ಅವಕಾಶ ನೀಡಬಾರದು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಭಕ್ತರಿಗೆ ಪೂಜಾ ಸೇವೆಗಳಿಗೆ ಜಿಲ್ಲಾಧಿಕಾರಿಗಳು ಅವಕಾಶ ನೀಡಿದ್ದಾರೆ ಎಂದು ಹೇಳಿದರು.
ಅರ್ಚಕರ ಜಗಳದಿಂದ ದೇವರ ಸೇವೆಗಳಿಂದ ವಂಚಿತರಾಗಿರುವ ದೇಶದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ಭಕ್ತರು ದೇವರು ಕೊಟ್ಟರೂ ಅರ್ಚಕರು ಕೊಡಲಿಲ್ಲ ಎನ್ನುವ ಹತಾಶ ಭಾವನೆಯಿಂದ ಮರಳಿರುವುದಾಗಿ ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss