ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಗದಗ :
ಜಿಲ್ಲೆಗೆ 10 ವೆಂಟಿಲೇಟರ್ ಮಂಜೂರಾಗಿ ಬಂದಿದೆ. ಶೀಘ್ರದಲ್ಲಿಯೇ ಅವುಗಳನ್ನು ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಖಾಸಗಿ ವ್ಯಕ್ತಿಯೊಬ್ಬರು ಆಕ್ಸಿಜನ್ ಘಟಕ ಆರಂಭಕ್ಕೆ ಅನುಮತಿ ಕೋರಿದ್ದರು. ಅವರಿಗೆ ಉನ್ನತ ಮಟ್ಟದಲ್ಲಿ ಪ್ರಯತ್ನಿಸಿ ಅನುಮತಿ ಕೊಡಿಸಲಾಗಿದ್ದು ಮುಂದಿನ 8 ರಿಂದ 10 ದಿನದಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್ ತಯಾರಿಸಿ ಸಿಲೆಂಡರ್ಗಳಿಗೆ ತುಂಬಿಸುವ ಕಾರ್ಯ ಆರಂಭವಾಗಲಿದ್ದು ಇದರಿಂದ ಸೋಂಕಿತರ ಚಿಕಿತ್ಸೆಗೆ ನೆರವಾಗಲಿದೆ ಎಂದರು.
ಜಿಮ್ಸ್ಗೆ 500 ಎಲ್.ಪಿ.ಎಮ್. ಹಾಗೂ ನರಗುಂದ ಆಸ್ಪತ್ರೆಗೆ 390 ಎಲ್.ಪಿ.ಎಮ್. ಆಕ್ಸಿಜನ್ ಉತ್ಪಾದನಾ ಘಟಕಗಳಿಗೆ ಸರ್ಕಾರವು ಮಂಜೂರಾತಿಯನ್ನು ನೀಡಿದೆ. ಈ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಸಿವಿಲ್ ಹಾಗೂ ವಿದ್ಯುತ್ ಕಾಮಗಾರಿಗಳನ್ನು ತಕ್ಷಣವೇ ಕೈಗೊಳ್ಳುವಂತೆ ಆದೇಶಿಸಿದ್ದು ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚು ಕಂಡು ಬರುವ ಪ್ರದೇಶಗಳಲ್ಲಿ ಪೊಲೀಸರ ನೆರವಿನೊಂದಿಗೆ ಸ್ಥಳೀಯ ಅಧಿಕಾರಿಗಳು ಸೋಂಕು ನಿಯಂತ್ರಣಕ್ಕೆ ಹಾಗೂ ಸೋಂಕಿತರ ತಪಾಸಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೋಂಕಿತರ ಚಿಕಿತ್ಸೆಗಾಗಿ ವಿತರಿಸಲಾಗುತ್ತಿರುವ ಮೆಡಿಸಿನ್ ಕಿಟ್ ವಿತರಣೆ ಸರಿಯಾಗಿ ಆಗಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಿಗಾವಣೆ ವಹಿಸುವಂತೆ ತಿಳಿಸಲಾಗಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ನಿರಂತರ ಕರ್ತವ್ಯ ನಿರ್ವಹಣೆಗೆ ಸೂಚಿಸಿದೆ. ಗ್ರಾಮೀಣ ಭಾಗದ ಸಾರ್ವಜನಿಕರು ದೇವಸ್ಥಾನ, ಗುಡಿಗಳಲ್ಲಿ ಗುಂಪಾಗಿ ಸೇರದಂತೆ ತಡೆಯಬೇಕು. ವಿನಾಕಾರಣ ಮಾರುಕಟ್ಟೆಗೆ ಆಗಮಿಸುವರ ಮೇಲೆ ಕ್ರಮವಹಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವರು ಹೇಳಿದರು.
ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿ.ಪಂ. ಸಿ.ಇ.ಓ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಸೇರಿದಂತೆ ಮುಂತಾದವರಿದ್ದರು.