ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸ ದಿಗಂತ ವರದಿ, ಬಳ್ಳಾರಿ:
ಕೋರೋನಾ ಸೊಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಸೋಂಕಿತ ರೋಗಿಗಳಿಗೆ ಅನುಕೂಲವಾಗಲೆಂದು ಆಕ್ಸಿಜನ್ ಸಹಿತ ಒಂದು ಸಾವಿರ ಬೆಡ್ಗಳ ತಾತ್ಕಾಲಿಕ ಆಸ್ಪತ್ರೆಯನ್ನು ತೋರಣಗಲ್ಲಿನ ಜಿಂದಾಲ್ ಕಾರ್ಖಾನೆ ಆವರಣದಲ್ಲಿ ನಿರ್ಮಾಣ ಮಾಡುತ್ತಿದ್ದು. ಸದ್ಯ, 200 ಹಾಸಿಗೆಗಗಳ ಸಿದ್ದತೆ ನಡೆದಿದೆ, ಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಜಿಲ್ಲೆಯ ತೋರಣಗಲ್ ಜಿಂದಾಲ್ ಗೆ ಭೇಟಿ ನೀಡಿ ಗುರುವಾರ ಮಾತನಾಡಿದರು. ಜಿಂದಾಲ್ ಸಂಸ್ಥೆಯವರು ಕೋರೊನಾ ಸೊಂಕಿತರಿಗೆ ಬೆಡ್ ಗಳ ವ್ಯವಸ್ಥೆ ಮಾಡಿದ್ದು, ಸಿದ್ದತೆ ಅಂತಿಮ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಇದನ್ನು ರೋಗಿಗಳ ಆರೈಕೆಗೆ ಒದಗಿಸಲಿದೆ. ಜನತೆ ಸೋಂಕು ಹರಡದಂತೆ ತಡೆಯಲು ಸ್ವಯಂ ನಿರ್ಬಂಧ ಹಾಕಿಕೊಳ್ಳುವುದು ಒಳ್ಳೆಯದು. ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಸ್ಯಾನಿಟೈಜರ್ ಬಳಕೆ ಮಾಡಬೇಕು, ವಿಶೇಷವಾಗಿ ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕರೋನಾ ಸೋಂಕಿತರಿಗೆ ಬೆಡ್ ಸಮಸ್ಯೆ ನೀಗಿಸಲು ಜಿಂದಾಲ್ ಸಂಸ್ಥೆಯ ಆವರಣದಲ್ಲಿ ಈ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡುತ್ತಿದೆ. ಸದ್ಯ 200ಕ್ಕೂ ಹೆಚ್ಚು ಬೆಡ್ಗಳು ಸಿದ್ಧಗೊಂಡಿವೆ. ಇದಕ್ಕೆ ಬೇಕಾದ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕಾರ್ಖಾನೆಯಿಂದಲೇ ಆಕ್ಸಿಜನ್ ಪೈಪ್ ಲೈನ್ ವ್ಯವಸ್ಥೆ ಮಾಡಲಾಗುತ್ತಿದೆ. ಕರೋನಾ ನಿಯಂತ್ರಣಕ್ಕೆ ವೈದ್ಯರು ಸೇರಿದಂತೆ ಇಡೀ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಅಲ್ಲಿ ಒತ್ತಡ ಕಡಿಮೆ ಮಾಡಲು ಇದನ್ನು ಜಿಂದಾಲ್ ಮಾಡುತ್ತಿದೆ ಎಂದರು.
ಒಂದು ಜಿಲ್ಲೆ ಒಂದು ರಾಜ್ಯ ಲಾಕ್ಡೌನ್ ಮಾಡಿದ್ರೆ ಸಮಸ್ಯೆ ಪರಿಹಾರವಾಗಲಿದೆ ಎಂದು ಅನಿಸುತ್ತಿಲ್ಲ, ತಜ್ಞರು ಹೇಳಿದ್ರೇ ಲಾಕ್ಡೌನ್ ಮಾಡಬಹುದು. ಕೇವಲ ಬಳ್ಳಾರಿ ಲಾಕ್ ಡೌನ್ ಮಾಡಿದ್ರೆ ಕೊರೊನಾ ನಿಯಂತ್ರಣವಾಗಲ್ಲ. ಸದ್ಯ ಸೆಮಿ ಲಾಕ್ಡೌನ್ ಇದೆ. ಪೂರ್ಣ ಪ್ರಮಾಣದ ಲಾಕ್ ಡೌನ್ ಮಾಡಿದ್ರು ಕಷ್ಟ, ಮಾಡದೆ ಇದ್ರೂ ಕಷ್ಟ ಎಂದರು. ಕೋರೊನಾ ಸೊಂಕು ಹೆಚ್ಚಾಗುತ್ತಿರುವುದನ್ನು ನಿಯಂತ್ರಣ ಮಾಡಲು ಸ್ವಯಂ ನಿರ್ಬಂಧ ಮಾಡಿಕೊಳ್ಳುವುದು ಒಳ್ಳೆಯದು. ಕಠಿಣವಾಗಿ ಕ್ರಮಕೈಗೊಂಡರೇ ಪೊಲೀಸರು ಕಿರುಕುಳ ಕೊಡ್ತಾರೆ ಎಂದು ಆರೋಪ ಮಾಡ್ತಾರೆ, ಎಲ್ಲದಕ್ಕೂ ಜನರು ಕೋರೋನಾ ನಿಯಂತ್ರಣಕ್ಕೆ ತಾವೇ ನಿಯಮಗಳ ಪಾಲಿಸಲು ಮುಂದಾಗಬೇಕು ಎಂದರು. ಈ ಸಂದರ್ಭ ಜೆಸ್ ಡಬ್ಲ್ಯೂ ಸಂಸ್ಥೆಯ ಮಂಜುನಾಥ ಪ್ರಭು, ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಟ್ಟಣಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.