ಕುಕ್ಕಂಕೂಡ್ಲು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ 108 ಕಾಯಿ ಮಹಾಗಣಪತಿ ಹೋಮ, ಶ್ರೀದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ

ಹೊಸ ದಿಗಂತ ವರದಿ, ಬದಿಯಡ್ಕ:

ಕುಕ್ಕಂಕೂಡ್ಲು ಶ್ರೀಕಂಠಪ್ಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರತಿಷ್ಠೆ ಗುರುವಾರ ಬೆಳಗ್ಗೆ ಮೀನಲಗ್ನದಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿದ್ದ ಪರಮಪೂಜ್ಯ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದವನ್ನು ಪಡೆದು ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಹಾಗೂ ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಅವರ ನೇತೃತ್ವದಲ್ಲಿ ತಾಂತ್ರಿಕ ಪ್ರಕ್ರಿಯೆಗಳು ಜರಗಿದವು.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಪರಿವಾರ ದೇವರ ಪ್ರತಿಷ್ಠಾ ಕಾರ್ಯದಲ್ಲಿ ಊರಪರವೂರ ನೂರಾರು ಮಂದಿ ಪಾಲ್ಗೊಂಡಿದ್ದರು. ಶ್ರೀ ದೇವರಿಗೆ ಕುಂಭೇಶ ಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಘೃತಾದಿ ದ್ರವ್ಯಗಳ ಪ್ರೋಕ್ಷಣೆ, ಜೀವ ಕಲಶಾಭಿಷೇಕ ನಡೆಯಿತು. ನಂತರ ಶ್ರೀ ಕ್ಷೇತ್ರದ ಗರ್ಭಗುಡಿಯ ಮೇಲ್ಭಾಗ ಮುಗುಳಿ(ಕಲಶ)ಯನ್ನು ಇಟ್ಟು ಅಭಿಷೇಕ ನಡೆಸಲಾಯಿತು. ಬೆಳಗ್ಗೆ ೧೦೮ ತೆಂಗಿನಕಾಯಿ ಮಹಾಗಣಪತಿ ಹೋಮ, ಪ್ರತಿಷ್ಠಾ ಪಾಣಿ, ಪ್ರತಿಷ್ಠಾ ಬಲಿ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನದಲ್ಲಿ ಭಕ್ತರು ಪಾಲ್ಗೊಂಡರು.
ಶುಕ್ರವಾರ ಬೆಳಗ್ಗೆ ಗಣಪತಿ ಹೋಮ, ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳು, ೧೦ ಗಂಟೆಗೆ ವಿದುಷಿ ಉಷಾ ಈಶ್ವರ ಭಟ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ ಸೋಪಾನ ಪೂಜೆ, ಮಹಾಪೂಜೆ, ಅಪರಾಹ್ನ ಯಕ್ಷವಿಹಾರಿ ಬದಿಯಡ್ಕ ಇವರಿಂದ ಯಕ್ಷಗಾನ ತಾಳಮದ್ದಳೆ ಜರಗಲಿದೆ. ರಾತ್ರಿ ಮಹಾಪೂಜೆ, ಪ್ರಸಾದ ಭೋಜನ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!