ಕಳೆದ 4 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿಗೆ ಜೀವತೆತ್ತ ಪತ್ರಕರ್ತರೆಷ್ಟು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತನ್ನ ಹಿತ್ತಲಲ್ಲಿಯೇ ಉಗ್ರರನ್ನು ಸಾಕಿಕೊಂಡಿದ್ದ ಪಾಕಿಸ್ತಾನಕ್ಕೀಗ ಉಗ್ರರಿಂದಲೇ ಉಪಟಳ ಹೆಚ್ಚಾಗಿದೆ. ಉಪದ್ರವ ತಾಳಲಾಗದೇ ಉಗ್ರರೊಂದಿಗೇ ʼಸೀಸ್‌ ಫೈರ್‌ʼ (ಕದನ ವಿರಾಮ) ಒಪ್ಪಂದ ಮಾಡಿಕೊಳ್ಳುವಷ್ಟರ ಮಟ್ಟಿಗೆ ಪಾಕಿಸ್ತಾನದ ಸ್ಥಿತಿ ಹದಗೆಟ್ಟಿದೆ. ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯವಂತೂ ಸಂಪೂರ್ಣವಾಗಿ ತೆಹ್ರೀಕ್‌-ಎ-ತಾಲೀಬಾನ್‌ ಪಾಕಿಸ್ತಾನ್‌ (ಟಿಟಿಪಿ) ಉಗ್ರರ ತಾಣವಾಗಿಬಿಟ್ಟಿದೆ. ವರದಿಯೊಂದರ ಪ್ರಕಾರ ಪಾಕಿಸ್ತಾನದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಭಯೋತ್ಪಾದಕ ದಾಳಿ 50ಶೇಕಡಾಗೂ ಅಧಿಕವಾಗಿದೆ. ಇನ್ನು ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿಗಳಾಗುತ್ತಿದ್ದು ಈ ಕುರಿತಂತೆ ಸ್ವತಃ ಪಾಕಿಸ್ತಾನದ ಸಚಿವರೊಬ್ಬರು ಪಾಕಿಸ್ತಾನದ ಸಂಸತ್ತಿನಲ್ಲಿ ಮಾಹಿತಿ ಹಂಚಿಕೊಂಡಿದ್ದು ಕಳೆದ ನಾಲ್ಕು ವರ್ಷಗಳಲ್ಲಿ ಪ್ರಾಣತೆತ್ತ ಪತ್ರಕರ್ತರ ಸಂಖ್ಯೆಯನ್ನು ತೆರೆದಿಟ್ಟಿದ್ದಾರೆ.

ಪಾಕಿಸ್ತಾನ ಸಂಸದೀಯ ವ್ಯವಹಾರಗಳ ಸಚಿವ ಮುರ್ತಾಜಾ ಜಾವೇದ್ ಅಬ್ಬಾಸಿ ಹಂಚಿಕೊಂಡ ಮಾಹಿತಿಯಂತೆ ಕಳೆದ 4 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ 42 ಪತ್ರಕರ್ತರು ಹತ್ಯೆಯಾಗಿದ್ದಾರೆ. ಮಾಹಿತಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಪಂಜಾಬ್‌ನ 15 ಪತ್ರಕರ್ತರು, ಸಿಂಧ್‌ ಪ್ರಾಂತ್ಯದ 11 ಪತ್ರಕರ್ತರು, ಖೈಬರ್ ಪಖ್ತುಂಕ್ವಾದ 13 ಪತ್ರಕರ್ತರು ಮತ್ತು ಮೂವರು ಬಲೂಚಿಸ್ತಾನದ ಪತ್ರಕರ್ತರು ಹತ್ಯೆಯಾಗಿದ್ದಾರೆ. ಇವರೆಲ್ಲರನ್ನೂ ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

“ಇದೊಂದು ವಿಷಮ ಪರಿಸ್ಥಿತಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಮತ್ತು ಪತ್ರಕರ್ತರಿಗೆ ವಿಶೇಷ ಭದ್ರತೆ ಒದಗಿಸಬೇಕು” ಎಂದು ಅಬ್ಬಾಸಿ ಹೇಳಿದ್ದಾರೆ. ಏತನ್ಮಧ್ಯೆ, ಬಲೂಚಿಸ್ತಾನ್ ಅವಾಮಿ ಪಕ್ಷದ ಸೆನೆಟರ್ ದಾನೇಶ್ ಕುಮಾರ್ ಅವರು ದಾಖಲೆಗಳಲ್ಲಿ ತೋರಿಸಿರುವ ಮೂವರ ಬದಲಿಗೆ ಹತ್ತಕ್ಕೂ ಹೆಚ್ಚು ಪತ್ರಕರ್ತರನ್ನು ಹತ್ಯೆಗೈಯ್ಯಲಾಗಿದೆ ಎಂದಿದ್ದಾರೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ರೇಟಿಂಗ್‌ನಲ್ಲಿ ಪಾಕಿಸ್ತಾನವು ಸತತವಾಗಿ ಕೆಳಮಟ್ಟದಲ್ಲಿದೆ, ವಿಶೇಷವಾಗಿ ಮಹಿಳಾ ಪತ್ರಕರ್ತರೆನಿಸಿಕೊಂಡವರ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದ್ದು ಮಹಿಳಾ ಪತ್ರಕರ್ತರು ಹಿಂಸಾಚಾರ ಮತ್ತು ಬೆದರಿಕೆಗಳ ಅಪಾಯದಲ್ಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!