Saturday, August 13, 2022

Latest Posts

‘ವನ ಬೆಳಕು’ನಲ್ಲಿ ಮೂಡಿದ ‘ವನ ಚೇತನ’: ಅಡವಿ ಶಾಲೆಗಳಿಗೆ ಹೊರಟು ನಿಂತ ಪೀಠೋಪಕರಣ

ಹೊಸ ದಿಗಂತ ವರದಿ, ಉಡುಪಿ:

ಒಂದು ವರ್ಷದಿಂದ ಯಾವುದೇ ಚಟುವಟಿಕೆಗಳಿಲ್ಲದೇ ಮಂಕಾದ ಅಡವಿ ಮಕ್ಕಳಲ್ಲಿ ಚೈತನ್ಯ ಮೂಡಿಸಲು 3ತಿಂಗಳ ಹಿಂದೆ ಆಯೋಜನೆಗೊಂಡ ‘ವನ ಬೆಳಕು’ ಶಿಬಿರವು ಇದೀಗ, ಅಡವಿ ಶಾಲೆಗಳಿಗೂ ನವ ಚೈತನ್ಯ ನೀಡುತ್ತಿದೆ. ಈ ಅಡವಿ ಮಕ್ಕಳ ಹೊಸ ವಿದ್ಯಾ ವಿಕಸನ ಯೋಜನೆ ‘ವನ ಚೇತನಾ’.
ಹೌದು, ಇದ್ಯಾವುದೂ ಸರಕಾರದ ಯೋಜನೆಗಳಲ್ಲ. ಬದಲಾಗಿ ಮಂಗಳೂರಿನ ಸಹ್ಯಾದ್ರಿ ಸಂಚಯ ತಂಡ ಹಮ್ಮಿಕೊಂಡ ಕಾರ್ಯಕ್ರಮಗಳು. ಈ ತಂಡ ಕಳೆದ ಡಿಸೆಂಬರ್‌ನಲ್ಲಿ ನೆರೆಯ ಉತ್ತರ ಕನ್ನಡ ಜಿಲ್ಲೆಯ ನಾನಾ ತಾಲೂಕುಗಳಲ್ಲಿ ವನ ಬೆಳಕು ಶಿಬಿರ ಆಯೋಜಿಸಿತ್ತು. ಈ ವೇಳೆ ಅನೇಕ ಶಾಲೆಗಳಲ್ಲಿ ಅಗತ್ಯ ಪೀಠೋಪಕರಣವಿಲ್ಲದೇ ಮಕ್ಕಳು ನೆಲದಲ್ಲಿ ಕುಳಿತು ಪಾಠ ಕೇಳುವುದು, ಬರೆಯುವುದನ್ನು ಗಮನಿಸಿತ್ತು. ಈ ಬಗ್ಗೆ ಯೋಚಿಸಿದಾಗ ಹುಟ್ಟಿಕೊಂಡಿರುವುದೇ ವನ ಚೇತನಾ ಯೋಜನೆ. ಇದರಲ್ಲಿ ಅಡವಿಯ ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಬೆಂಬಲ, ಸಹಾಯ ನೀಡುವ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

10 ಶಾಲೆಗಳಿಗೆ ವಿವಿಧ ಪೀಠೋಪಕರಣಗಳು

ಉ.ಕ. ಜಿಲ್ಲೆಯ 10 ಶಾಲೆಗಳಿಗೆ ಈ ಯೋಜನೆಯಡಿಯಲ್ಲಿ 5ಲಕ್ಷ ರೂ. ಮೌಲ್ಯದ ಪೀಠೋಪಕರಣ ವಿತರಿಸಲಾಗುತ್ತಿದೆ. ಜೊಯಿಡಾ ತಾಲೂಕಿನಲ್ಲಿ ಕುಂವಾರವಾಡ, ನಾಗೋಡ, ಮೇಸ್ತ ಬಿರೊಡದ ಒಟ್ಟು ಮೂರು ಶಾಲೆಗಳಿಗೆ 30 ಬೆಂಚು-ಡೆಸ್ಕ್, ಒಂದು ಕಪಾಟು ಮತ್ತು ಒಂದು ಮೇಜು ಮತ್ತು ಕುರ್ಚಿ ನೀಡಲಾಗುತ್ತಿದೆ. ಅಣಶಿ ಮತ್ತು ಮಾಟಗಾಂವ್ ಶಾಲೆಗಳಿಗೆ 2ನಲಿ-ಕಲಿ ಟೇಬಲ್, ಲೈಬ್ರೆರಿ ಕಪಾಟು, ಬೆಂಚು-ಡೆಸ್ಕ್, ಕುರ್ಚಿಗಳು, ಕಪಾಟು ವಿತರಿಸಲಾಗುತ್ತಿದೆ. ಯಲ್ಲಾಪುರ ತಾಲೂಕಿನಲ್ಲಿ ತೊಟ್ಟಿಲು ಗುಂಡಿ, ನಂದೋಳ್ಳಿ, ಕೆಲಾಶೆ, ಕಲ್ಲೇಶ್ವರ, ಹೆಗ್ಗಾರು ಶಾಲೆಗಳಿಗೆ 34 ಡೆಸ್ಕ್-ಬೆಂಚುಗಳು, 2 ನಲಿ-ಕಲಿ ಟೇಬಲ್, ಮೇಜು, ಕುರ್ಚಿಗಳನ್ನು ಒದಗಿಸಲಾಗುತ್ತಿದೆ. ಪೀಠೋಪಕರಣಗಳನ್ನು ಹುಬ್ಬಳ್ಳಿಯ ನಾಗರತ್ನ ಸ್ಟೀಲ್ ಇಂಡಸ್ಟ್ರೀಸ್‌ನಲ್ಲಿ ತಯಾರಿಸಿದ್ದು, ಮಾ. 12ರಿಂದ 15ರವರೆಗೆ ವಿತರಿಸಲಾಗುತ್ತಿದೆ.

ಬುಡಕಟ್ಟು ಸಮುದಾಯದ ಮಕ್ಕಳಿಗೆ ಸಹಕಾರ
ಜೊಯಿಡಾ, ಯಲ್ಲಾಪುರ, ಅಣಶಿಯ ಅಡವಿ ಶಾಲೆಗಳಲ್ಲಿ ಸಿದ್ಧಿ, ಹಾಲಕ್ಕಿ, ಕುಡುಬಿ, ಗೌಳಿ ಬುಡಕಟ್ಟು ಸಮುದಾಯದ ಮಕ್ಕಳು ಇಂದಿಗೂ ಆರ್ಥಿಕ ಬೆಂಬಲ ಇಲ್ಲದೆ ಶಿಕ್ಷಣ ವಂಚಿತರಾಗುತ್ತಿದ್ದಾರೆ. ಆ ಮಕ್ಕಳಿಗೆ ಶಿಕ್ಷಣ ಪರಿಕರ, ಪೀಠೋಪಕರಣ, ಆರ್ಥಿಕ ಸಹಕಾರ ನೀಡುವುದು ‘ವನ ಚೇತನಾ’ ಕಾರ್ಯಕ್ರಮದ ಮೂಲ ಉದ್ದೇಶ. ಮೊದಲ ಕಂತಿನಲ್ಲಿ ಬುಡಕಟ್ಟು ಮಕ್ಕಳ ಶಾಲೆಗಳಿಗೆ ನೀಡುವ ಪೀಠೋಪಕರಣಗಳ ಪ್ರಾಯೋಜಕತ್ವ ಮಂಗಳೂರಿನ ಎಂಸಿಎ್ (ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಜರ್) ಸಂಸ್ಥೆ ವಹಿಸಿದೆ. ಮಂಗಳೂರಿನ ಆಲ್ಟರ್ ಮಾರ್ಕೆಟಿಂಗ್ ಸಂಸ್ಥೆ ಮತ್ತು ಅನಿವಾಸಿ ಭಾರತೀಯ ಪಣಂಬೂರು ವಾಸುದೇವ ಐತಾಳರ ಸಹಕಾರವಿದೆ. ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ಧಿ ಅವರೂ ಈ ಕಾರ್ಯಕ್ರಮ ಬೆಂಬಲ ನೀಡುತ್ತಿದ್ದಾರೆಂದು ಕಾರ್ಯಕ್ರಮದ ರೂವಾರಿ, ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ ವಿವರಿಸುತ್ತಾರೆ.

ಶಿಕ್ಷಣವೊಂದೇ ಅಡವಿ ಮಕ್ಕಳ ವಿಕಸನದ ದಾರಿ
ಅಡವಿ ಮಕ್ಕಳಿಗೆ ಶಿಕ್ಷಣ ಲಭಿಸಬೇಕು. ಅದಕ್ಕೆ ಪೂರಕವಾದ ಶೈಕ್ಷಣಿಕ ಪರಿಕರಗಳು, ಸವಲತ್ತುಗಳು ಮತ್ತು ಆರ್ಥಿಕ ಚೈತನ್ಯ ಲಭಿಸುವಂತಾಗಬೇಕು. ಅವರು ಶೈಕ್ಷಣಿಕವಾಗಿ ಪ್ರಬಲರಾಗಿ ಅರಣ್ಯ ಇಲಾಖೆ ಅಥವಾ ಸಮಾಜದ ವಿವಿಧ ಹುದ್ದೆಗಳಲ್ಲಿ ಅಥವಾ ನಾಯಕತ್ವ ವಹಿಸಿಕೊಂಡಾಗ ವನ ಸಂರಕ್ಷಣೆಯ ಜೊತೆಗೆ ಬುಡಕಟ್ಟು ಸಮುದಾಯ ಹಲವಾರು ವರ್ಷಗಳಿಂದ ವಂಚನೆ, ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಪಿಡುಗಿಗೆ ತಡೆಯಾಗಬಹುದು ಎಂದು ಮಂಗಳೂರು ಸಹ್ಯಾದ್ರಿ ಸಂಚಯ ಸಂಚಾಲಕ ದಿನೇಶ್ ಹೊಳ್ಳ ಹೇಳಿದರು.

ಕಾಡಿನ ಜನರತ್ತ ದೃಷ್ಟಿಹರಿಸಬೇಕಿದೆ ಸರಕಾರ-ಸಮಾಜ
ಅರಣ್ಯ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಬುಡಕಟ್ಟು ಅಭಿವೃದ್ಧಿ ಯೋಜನೆ.. ಹೀಗೆ ಹಲವು ಇಲಾಖೆಗಳಿದ್ದರೂ ಯೋಜನೆಗಳಿದ್ದರೂ ಉ.ಕ. ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶದಲ್ಲಿರುವ ಬುಡಕಟ್ಟು ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಲೇ ಇದ್ದಾರೆ. ಜೊಯಿಡಾ, ಯಲ್ಲಾಪುರ ಮುಂತಾದ ಕಡೆಗಳ ಮಕ್ಕಳು ಶಾಲೆಗಳಿದ್ದರೂ ಅಲ್ಲಿ ಸೂಕ್ತ ಮೂಲಸೌಕರ್ಯಗಳಿಲ್ಲದೇ ಕಷ್ಟಪಡುತ್ತಿದ್ದಾರೆ. ಈ ಮಕ್ಕಳಿಗೆ ಶಿಕ್ಷಣಕ್ಕೆ ಸಹಕಾರ ನೀಡಿದರೆ, ಕಾಡಿನಲ್ಲಿ ಬದುಕುತ್ತಿರುವವರ ಜೀವನ ಮಟ್ಟದಲ್ಲಿ ಗಣನೀಯ ಬದಲಾವಣೆ ಖಂಡಿತ ಸಾಧ್ಯವಿದೆ. ಇದಕ್ಕೆ ಸರಕಾರ ಮತ್ತು ಸಮಾಜ ಮನಸ್ಸು ಮಾಡಬೇಕೆಷ್ಟೇ.

ಮಕ್ಕಳ ‘ಅರಣ್ಯ ರೋದನ’ಕ್ಕೆ ಕಿವಿಯಾಗಬೇಕು!
ಜೊಯಿಡಾ ಒಂದು ತಾಲೂಕಿನಲ್ಲಿಯೇ ಕಾಡಿನೊಳಗೆ 120 ಶಾಲೆಗಳಿವೆ. ಹಲವಾರು ಮಂದಿ ಜೋಯಿಡಾದ ದಟ್ಟಾರಣ್ಯಗಳಿಗೆ ಕಾಡು ಸುತ್ತಾಟ, ಟ್ರಕ್ಕಿಂಗ್, ಪರಿಸರ ಅಧ್ಯಯನಕ್ಕಾಗಿ ಹೋಗುತ್ತಾರೆ. ಅಲ್ಲಿನ ಸ್ವಚ್ಛ ಪರಿಸರವನ್ನು ಅನುಭವಿಸುವವರಿಗೆ ಅಲ್ಲಿನ ಮಕ್ಕಳ ಅತಂತ್ರ ಪರಿಸ್ಥಿತಿ, ಅವರು ಅನುಭವಿಸುವ ಸಮಸ್ಯೆಗಳು ಗೋಚರಕ್ಕೆ ಬಾರದೇ ಇರುವುದು ವಿಪರ್ಯಾಸ. ಆದ್ದರಿಂದ ಈ ರೀತಿ ಅರಣ್ಯಕ್ಕೆ ಹೋಗುವವರು ಕೂಡ ಅಲ್ಲಿನ ಮಕ್ಕಳ ಅರಣ್ಯ ರೋದನಕ್ಕೆ ಕಿವಿಯಾಗಬೇಕಿರುವುದು ಅಗತ್ಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss