Monday, August 8, 2022

Latest Posts

ರಾಜ್ಯದಲ್ಲಿ ದೇಗುಲಗಳ ತೆರವುಗೊಳಿಸುವುದು ಸರಿಯಲ್ಲ: ಮಾಜಿ ಸಿಎಂ ಯಡಿಯೂರಪ್ಪ

ಹೊಸ ದಿಗಂತ ವರದಿ, ಮೈಸೂರು:

ರಾಜ್ಯದಲ್ಲಿ ದೇಗುಲಗಳನ್ನು ತೆರವುಗೊಳಿಸುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿ ಕೇಂದ್ರಸ್ವಾಮಿಗಳೊoದಿಗೆ ಕೆಲಕಾಲ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶ ಪಾಲನೆಗೆಂದು ದೇವಾಲಯಗಳನ್ನು ಯಂತ್ರಗಳನ್ನು ಬಳಸಿ ತೆರವು ಮಾಡಲು ಮುಂದಾಗಿರುವುದು ಸರಿಯಲ್ಲ. ತೆರವುಗೂ ಮುನ್ನಾ ದೇವಸ್ಥಾನದ ಸಂಬoಧಿಸಿದವರೊoದಿಗೆ ಚರ್ಚಿಸಬೇಕಾಗಿತ್ತು. ಆದರೆ ಅದನ್ನು ಮಾಡದೆ ಏಕಾಏಕಿ ತೆರವು ಮಾಡಬಾರದು. ದೇವಾಲಯಗಳನ್ನು ತೆರವು ಮಾಡಬಾರದು ಎಂದು ನಾನೂ ಆಗ್ರಹಿಸುತ್ತೇನೆ. ಯಾವುದೇ ಕಾರಣಕ್ಕೆ ತೆರವುಗೊಳಿಸಬಾರದು ಎಂದು ಈಗಾಗಲೇ ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕ್ರಮವಹಿಸಲಿದ್ದಾರೆ ಎಂದರು.
ಕರ್ನಾಟಕದಲ್ಲಿ ಬೊಮ್ಮಾಯಿ ಅವರು ಸಹ ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಭಾರತವನ್ನು ಜಗತ್ತಿನಲ್ಲಿಯೇ ಮುಂದುವರಿದ ದೇಶವನ್ನಾಗಲಿ ಮಾಡಲು ಮತ್ತೊಮ್ಮೆ ಪ್ರಧಾನಿಯಾಗಲೆಂದು ಪ್ರಾರ್ಥಿಸುತ್ತೇನೆ. ಮೋದಿ ಅವರ ದೂರದೃಷ್ಟಿಯಿಂದ ಪ್ರಪಂಚವೇ ಅಚ್ಚರಿಪಡುವಂತೆ ಭಾರತ ದೇಶ ಮುನ್ನಡೆಯುತ್ತಿದೆ. ತಮ್ಮ ನಾಯಕತ್ವದ ಮೂಲಕ ಮೋದಿ ಅವರು ಉತ್ತಮ ಸಾಧನೆ ಮಾಡಿ ತೋರಿಸಿದ್ದಾರೆ ಎಂದು ಹೊಗಳಿದರು.
ವಿಧಾನಸಭೆಯ ಅಧಿವೇಶನ ಮುಗಿದ ಮೇಲೆ ಪಕ್ಷ ಸಂಘಟನೆ ದೃಷ್ಟಿಯಿಂದ ನಾವು ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇವೆ. ನಾನು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು ರಾಜ್ಯ ಪ್ರವಾಸ ಮಾಡುತ್ತೇವೆ. ಅಧಿವೇಶನ ಮುಗಿದ 15 ದಿನಗಳ ನಂತರ ಈ ಬಗ್ಗೆ ರೂಪುರೇಷೆಗಳನ್ನು ಸಿದ್ಧ ಮಾಡಲಾಗುವುದು ಎಂದು ತಿಳಿಸಿದರು.
ಉಪ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಇಲ್ಲ
ಸದ್ಯಕ್ಕೆ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಅವರು ಉಪಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದರು. ಈ ವೇಳೆ ಶಾಸಕ ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ, ಮೈಸೂರು ನಗರಪಾಲಿಕೆಯ ಮೇಯರ್ ಸುನಂದಪಾಲನೇತ್ರ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss