ಈ ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ಕೊಡೋದು ಅನ್ನ-ಉಪ್ಪು ಮಾತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ಅಯೋಧ್ಯೆಯ ಪ್ರಾಥಮಿಕ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟಕ್ಕೆ ಅನ್ನ-ಉಪ್ಪು ನೀಡುತ್ತಿರುವ ವಿಡಿಯೋವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. ನೆಲದ ಮೇಲೆ ಕುಳಿತುಕೊಂಡು ಅನ್ನ-ಉಪ್ಪು ತಿನ್ನುತ್ತಿರುವ ಮಕ್ಕಳ ವಿಡಿಯೋವನ್ನು ಪತ್ರಕರ್ತ ಪಿಯೂಷ್ ರೈ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಎನ್ನುತ್ತೀರಿ, ಆದರೆ ಇಲ್ಲಿ ಅನ್ನದ ಜೊತೆ ಮಕ್ಕಳು ಉಪ್ಪು ತಿಂತಿದ್ದಾರೆ, ಸಾರು, ಪಲ್ಯ ಏನೂ ಇಲ್ಲ. ಸಿಎಂ ಯೋಗಿ ಆದಿತ್ಯನಾಥ್ ಅವರೇ ನೀವು ಈ ವಿಡಿಯೋ ನೋಡಲೇಬೇಕು ಎಂದು ಹಿನ್ನೆಲೆ ಧ್ವನಿಯೊಂದು ವಿಡಿಯೋದಲ್ಲಿ ಕೇಳಿಬರುತ್ತದೆ.

ಮಧ್ಯಾಹ್ನದ ಊಟಕ್ಕೆ ಮಕ್ಕಳನ್ನು ಚೀಲಗಳ ಮೇಲೆ ಕುಳಿತುಕೊಳ್ಳಲು ಶಿಕ್ಷಕರು ಒತ್ತಾಯಿಸುತ್ತಾರೆ. ಇನ್ನು ಮಾಡಿಟ್ಟಿರುವ ಮೆನು ಪ್ರಕಾರ ಯಾವುದೇ ಆಹಾರ ತಯಾರಾಗುವುದಿಲ್ಲ. ಶಾಲೆಯ ಪ್ರಾಂಶುಪಾಲರೇ ಸರಿಯಾಗಿ ಶಾಲೆಗೆ ಬರುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸರ್ಕಾರ ಪ್ರತಿ ಮಗುವಿಗೆ ಪ್ರತಿ ಊಟಕ್ಕೆ ಕೊಡುತ್ತಿರುವ ಹಣದಲ್ಲಿ ಪೌಷ್ಠಿಕ ಆಹಾರ ನೀಡಲು ಆಗುತ್ತಿಲ್ಲ, ಸೂಕ್ತ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ. ಗ್ರಾಮದ ಮುಖ್ಯಸ್ಥರಿಗೆ ನೊಟೀಸ್ ನೀಡಲಾಗಿದೆ. ಮಕ್ಕಳು ಶಾಲೆಯಲ್ಲಿ ಏನು ತಿನ್ನುತ್ತಾರೆ ಎಂದು ತಿಳಿಯದ ಪೋಷಕರು, ವಿಡಿಯೋ ನೋಡಿ ಶಾಲೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!