ಹೊಸ ದಿಗಂತ ವರದಿ, ನಾಪೋಕ್ಲು:
ಸಮೀಪದ ಯವಕಪಾಡಿ ಗ್ರಾಮದಲ್ಲಿ ಶುಕ್ರವಾರ ಸುರಿದ ಭಾರಿ ಗಾಳಿ ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ.
ಯವಕಪಾಡಿ ಗ್ರಾಮದ ನಾಲ್ಕುನಾಡು ಅರಮನೆಯ ಸಮೀಪ ಬಿರುಸಿನ ಮಳೆ ಸುರಿದಿದ್ದು ಇಲ್ಲಿನ ನಿವಾಸಿ ಕುಡಿಯರ ಗಣೇಶ್ ಎಂಬವರ ಶೌಚಾಲಯದ ಶೀಟ್ಗಳ ಮೇಲೆ ದೊಡ್ಡ ಗಾತ್ರದ ಕಲ್ಲೊಂದು ಉರುಳಿ ಬಿದ್ದು, ಶೌಚಾಲಯದ ಹೆಂಚುಗಳು ಪುಡಿಯಾಗಿ ಅಪಾರ ನಷ್ಟ ಸಂಭವಿಸಿದೆ.
ಉರುಳಿ ಬಂದ ಕಲ್ಲು ಭಾರಿ ಶಬ್ಧದೊಂದಿಗೆ ಬಿದ್ದುದರಿಂದ ಮನೆಯವರು ಭಯ ಭೀತರಾಗಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಮನೆಯ ಒಳಗಡೆ ಇದ್ದುದರಿಂದ ಯಾವುದೇ ಅಪಾಯವಾಗಿಲ್ಲ.
ಹಾನಿ ಸಂಭವಿಸಿದ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಕುಡಿಯರ ಭರತ್ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪಿಡಿಒ ಗಮನಕ್ಕೆ ತರಲಾಗಿದ್ದು ಪಿಡಿಒ ಅಶೋಕ ಅವರು ತಾತ್ಕಾಲಿಕ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.