ನಾಳೆ ಹಾರಂಗಿಯಲ್ಲಿ ಕೊಡಗಿನ ಮೂರನೇ ಸಾಕಾನೆ ಶಿಬಿರ ಲೋಕಾರ್ಪಣೆ

ಹೊಸದಿಗಂತ ವರದಿ ಮಡಿಕೇರಿ:

ಕೊಡಗಿನ ಪ್ರವಾಸಿ ತಾಣಗಳಲ್ಲೊಂದಾಗಿರುವ ಹಾರಂಗಿಯಲ್ಲಿ ಜಿಲ್ಲೆಯ ಮೂರನೇ ಸಾಕಾನೆ ಶಿಬಿರ ಇಂದು (ಅ.8)ಲೋಕಾರ್ಪಣೆಗೊಳ್ಳಲಿದೆ. ಕೊಡಗಿನ ದುಬಾರೆ ಮತ್ತು‌ ಮತ್ತಿಗೋಡು ಸಾಕಾನೆಗಳ ಶಿಬಿರಗಳ ಸಾಲಿಗೆ ಕೂಡುಮಂಗಳೂರು ಪಂಚಾಯತಿ ವ್ಯಾಪ್ತಿಯ ಹಾರಂಗಿಯಲ್ಲಿ ನಿರ್ಮಾಣಗೊಂಡಿರುವ ನೂತನ ಶಿಬಿರ ಸೇರ್ಪಡೆಗೊಳ್ಳಲಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರು ಈ ಶಿಬಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ದುಬಾರೆ ಶಿಬಿರದಲ್ಲಿ ಸಾಕಾನೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಒತ್ತಡ ಹಾಗೂ ನಿರ್ವಹಣೆ ಸಮಸ್ಯೆಯಿಂದ ಹೊಸ ಶಿಬಿರ‌ ಆರಂಭಿಸಲಾಗಿದೆ. ಹಾರಂಗಿ ಜಲಾಶಯದ ಬಲಭಾಗದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ 40 ಎಕರೆ ಟ್ರೀಪಾರ್ಕ್‌ಗೆ ಹೊಂದಿಕೊಂಡಂತೆ ಇರುವ 10 ಎಕರೆ ಪ್ರದೇಶದಲ್ಲಿ ನೂತನ ಸಾಕಾನೆ ಶಿಬಿರ‌ ನಿರ್ಮಿಸಲು ಸರ್ಕಾರ 50 ಲಕ್ಷ ರೂ.ಗಳ ಅನುದಾನ ಒದಗಿಸಿತ್ತು. ಅದರಂತೆ ಸಾಕಾನೆ ಶಿಬಿರದ ಜೊತೆಗೆ ಟ್ರೀಪಾರ್ಕ್ ಕೂಡಾ ಲೋಕಾರ್ಪಗೊಳ್ಳಲಿದೆ.

ದುಬಾರೆಯಲ್ಲಿ ಒಟ್ಟು 32 ಸಾಕಾನೆಗಳಿದ್ದು, ಅಲ್ಲಿಂದ 15 ಸಾಕಾನೆಗಳನ್ನು ಹಾರಂಗಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಪ್ರಾರಂಭಿಕ ಹಂತವಾಗಿ ಈಗಾಗಲೇ ಏಕದಂತ, ರಾಮ, ಮಾರುತಿ, ಸುಬ್ರಹ್ಮಣ್ಯ, ವಿಕ್ರಮ ಹೆಸರಿನ‌ 5 ಸಾಕಾನೆಗಳನ್ನು ಸ್ಥಳಾಂತರಿಸಲಾಗಿದ್ದು, ದಸರಾದಲ್ಲಿ ಪಾಲ್ಗೊಂಡಿರುವ ವಿಜಯ ಆನೆ ಮೈಸೂರಿನಿಂದ ನೇರವಾಗಿ ಹೊಸ ಶಿಬಿರ ಸೇರಿಕೊಳ್ಳಲಿದೆ.

ಮಾವುತ, ಕಾವಾಡಿಗರಿಗೆಂದು ಈಗಾಗಲೇ 4 ವಸತಿಗೃಹಗಳನ್ನು ನಿರ್ಮಿಸಲಾಗಿದ್ದು, ಇನ್ನೂ 4 ನಿರ್ಮಾಣ ಹಂತದಲ್ಲಿವೆ.
ಮುಂಬರುವ ದಿನಗಳಲ್ಲಿ ಪ್ರವಾಸಿಗರಿಗೆ ತಲಾ 30 ರೂ. ಪ್ರವೇಶ ಶುಲ್ಕ‌ ನಿಗದಿಪಡಿಸಲಿದ್ದು, ಇದರೊಂದಿಗೆ ಹಾರಂಗಿ‌ ಹಿನ್ನೀರಿನಲ್ಲಿರುವ ಎರಡು ಪೆಡಲ್ ಬೋಟ್ಗಳನ್ನು ಬೋಟಿಂಗ್‌ಗಾಗಿ ನೀಡಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಪ್ರತ್ಯೇಕವಾಗಿ ತಲಾ 50 ರೂ.ನಿಗದಿಪಡಿಸಲಿರುವುದಾಗಿ‌ ಹೇಳಲಾಗಿದೆ.

ಸಾಕಾನೆ ಶಿಬಿರ ಪ್ರಾರಂಭವಾದ ಬಳಿಕ‌ ಹಂತಹಂತವಾಗಿ ಮತ್ತಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿ ಶಿಬಿರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!