Tuesday, June 6, 2023

Latest Posts

ಕರ ನಿರಾಕರಣೆ ಚಳವಳಿ ಹೋರಾಟಗಾರರ ಮಾಹಿತಿ ಫಲಕ ಉದ್ಘಾಟನೆ

ಹೊಸದಿಗಂತ ವರದಿ, ಅಂಕೋಲಾ:

ಕರ ನಿರಾಕರಣೆ ಚಳವಳಿಯಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ಅಂಕೋಲಾ ತಾಲೂಕಿಗೆ ಕರ್ನಾಟಕದ ಬಾರ್ಡೋಲಿ ಎಂಬ ಹೆಸರು ತಂದ ಹೋರಾಟಗಾರರನ್ನು ನೆನಪಿಸುವ ಮಾಹಿತಿ ಫಲಕದ ಉದ್ಘಾಟನಾ ಕಾರ್ಯಕ್ರಮ ಭಾಸಗೋಡ ಸೂರ್ವೆಯ ಕಳಸ ದೇವಸ್ಥಾನದ ಬಳಿ ನಡೆಯಿತು.
ಹಿರಿಯ ಸಾಹಿತಿ ಶಾಂತಾರಾಮ ನಾಯಕ ಅವರು ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಇರುವ ಫಲಕವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬ್ರಿಟಿಷರ ವಿರುದ್ಧ ಕರ ನಿರಾಕರಣೆ ಆಂದೋಲನಕ್ಕೆ ದುಮುಕಿ 291ಜನ ಜೈಲುವಾಸ ಅನುಭವಿಸಿದ ಅಂದಿನ ಹೋರಾಟದಲ್ಲಿ ಪುರುಷರಿಗೆ ಸರಿ ಸಮಾನರಾಗಿ ಮಹಿಳೆಯರೂ ಹೋರಾಟಕ್ಕೆ ಇಳಿದಿರುವುದು ಈ ನೆಲದ ದೇಶಾಭಿಮಾನದ ಕುರಿತು ಎಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ, ಅಂಕೋಲೆಯ ನೆಲದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಕಥಾನಕಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಯವರು ಅಧ್ಯಯನ ಮಾಡುವುದು ಅಗತ್ಯ ಎಂದರು.
ಮಾಹಿತಿ ಫಲಕ ನಿರ್ಮಿಸಿದ ನಿವೃತ್ತ ಉಪನ್ಯಾಸಕ ವಸಂತ ನಾಯಕ ಮಾತನಾಡಿ 90 ವರ್ಷಗಳ ಹಿಂದೆ ಕರನಿರಾಕರಣೆಯನ್ನು ಮಾಡಿಯೇ ತೀರುತ್ತವೆ ಎಂಬ ಪ್ರತಿಜ್ಞೆಗೆ ಸಾಕ್ಷಿಯಾದ ಹೋರಾಟದ ಪುಣ್ಯ ಭೂಮಿ ಐತಿಹಾಸಿಕ ಪ್ರವಾಸಿ ಸ್ಥಳವಾಗಬೇಕು ಎಂದರು.
ಅಂಕೋಲಾ ತಾಲೂಕಿನ ಸ್ವಾತಂತ್ರ್ಯ ಹೋರಾಟದ ಘಟನಾವಳಿಗಳನ್ನು ಪುಸ್ತಕಗಳ ರೂಪದಲ್ಲಿ ಹೊರತಂದಿರುವ ಶಾಂತಾರಾಮ ನಾಯಕ ಹಿಚ್ಕಡ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಎನ್. ಬಿ.ನಾಯಕ, ಹರಿಶ್ಚಂದ್ರ ನಾಯಕ, ಬೊಮ್ಮಯ್ಯ ನಾಯಕ, ಬೀರಣ್ಣ ನಾಯಕ, ಗೋಪಾಲಕೃಷ್ಣ ನಾಯಕ, ವಿಠ್ಠಲ ಗಾಂವಕರ್, ತಾ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ನಾಯಕ, ಶಾಂತಿ ಆಗೇರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ನಾಯಕ ಉಪಸ್ಥಿತರಿದ್ದರು
ಮಹಾದೇವ ನಾಯಕ ಸ್ವಾಗತಿಸಿದರು, ರಾಜೇಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು, ಗಣಪತಿ ನಾಯಕ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!