ಭಾರತದಲ್ಲಿ ಕ್ರೀಡಾಸಾಧಕರಿಗೆ ಹೆಚ್ಚಿದ ಅವಕಾಶಗಳು: ಎಸ್.ವಿ.ಸುನಿಲ್

ಹೊಸದಿಗಂತ ವರದಿ,ಮಡಿಕೇರಿ:

ರೋಟರಿ ಜಿಲ್ಲಾ ಕ್ರೀಡಾಕೂಟದಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ತಂಡವು ಅತ್ಯಧಿಕ ಬಹುಮಾನಗಳೊಂದಿಗೆ ರೋಟರಿ ಜಿಲ್ಲೆಯ ಕ್ರೀಡಾ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಎರಡು ದಿನಗಳ ರೋಟರಿ ಜಿಲ್ಲೆ 3181ರ ಕ್ರೀಡಾಸ್ಪರ್ಧೆ ಕ್ರೀಡಾಸಿರಿ ಸಮಾಪನಗೊಂಡಿದ್ದು, ಮಿಸ್ಟಿ ಹಿಲ್ಸ್ 14 ಚಿನ್ನ, 5 ಬೆಳ್ಳಿ, 6 ಕಂಚಿನ ಪದಕಗಳೊಂದಿಗೆ ಕ್ರೀಡಾ ಸ್ಪರ್ಧೆಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಪುತ್ತೂರು ಇಲೈಟ್ ರೋಟರಿ ಕ್ಲಬ್ ತಂಡವು 9 ಚಿನ್ನ, 6 ಬೆಳ್ಳಿ ಪಡೆದು ಎರಡನೇ ಸ್ಥಾನ ಪಡೆಯಿತು. ಪುತ್ತೂರು ಸಿಟಿ ತಂಡವು 7 ಚಿನ್ನ, 7 ಬೆಳ್ಳಿ, 3 ಕಂಚಿನ ಬಹುಮಾನದೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿತು.
ಕ್ರೀಡಾಸಿರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದ ಅರ್ಜುನ ಪ್ರಶಸ್ತಿ ವಿಜೇತ ಹಾಕಿ ಕ್ರೀಡಾತಾರೆ ಎಸ್.ವಿ.ಸುನಿಲ್ ಮಾತನಾಡಿ, ಭಾರತದ ಕ್ರೀಡಾರಂಗವು ಸಾಧಕರಿಗೆ ಉತ್ತಮ ಅವಕಾಶ ನೀಡುತ್ತಿದೆ. ಇದರ ಸದುಪಯೋಗವನ್ನು ನಾಡಿನ ಪ್ರತಿಭಾವಂತ ಕ್ರೀಡಾಪಟುಗಳು ಮಾಡಿಕೊಳ್ಳಬೇಕೆಂದು ಹೇಳಿದರಲ್ಲದೆ, ಸಾಮಾಜಿಕ ಸೇವಾ ಸಂಸ್ಥೆಯಾದ ರೋಟರಿ ಕೂಡಾ ತನ್ನ ಸದಸ್ಯರ ಕ್ರೀಡಾಸಾಧನೆಗೆ ಇಂತಹ ಕ್ರೀಡಾಕೂಟಗಳ ಮೂಲಕ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಕಾರ್ಯದರ್ಶಿ ನಾರಾಯಣ ಹೆಗಡೆ, ಸಹಾಯಕ ಗವರ್ನರ್‌ ಮಂಜುನಾಥ ಆಚಾರ್ಯ, ರತನ್ ತಮ್ಮಯ್ಯ, ಜಿಲ್ಲಾ ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಕೆ.ರವೀಂದ್ರ ರೈ, ಕ್ರೀಡಾಕೂಟದ ಆಯೋಜನಾ ಸಮಿತಿ ಅಧ್ಯಕ್ಷ ದೇವಣಿರ ತಿಲಕ್, ಉಪಾಧ್ಯಕ್ಷ ಮೋಹನ್ ಪ್ರಭು, ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ಹಾಜರಿದ್ದರು. ರೋಟರಿ ಜಿಲ್ಲೆಯ 32 ಕ್ಲಬ್’ಗಳಿಂದ 260 ಕ್ರೀಡಾಸ್ಪರ್ಧಿಗಳು ಪಾಲ್ಗೊಂಡಿದ್ದರು.
ಬಹುಮಾನ ವಿತರಣೆಗೂ ಮುನ್ನ ನಡೆದ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಪುತ್ತೂರು ಸಿಟಿ ನಡುವಿನ ಹಗ್ಗಜಗ್ಗಾಟ ರೋಮಾಂಚಕಾರಿಯಾಗಿದ್ದು ಮಿಸ್ಟಿ ಹಿಲ್ಸ್ ಜಯಮಾಲೆ ತನ್ನದಾಗಿಸಿಕೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!