Tuesday, August 16, 2022

Latest Posts

ಹೆಚ್ಚುತ್ತಿರುವ ಕೋರೊನಾ: ಕೇರಳ- ಮಹಾರಾಷ್ಟ್ರಗಳ ವಾಹನಗಳ ಮೇಲೆ ನಿಗಾಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಸೂಚನೆ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಕೋರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಬರುವ ಈ ಎರಡೂ ರಾಜ್ಯದ ವಾಹನಗಳ ಮೇಲೆ ನಿಗಾ ವಹಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ದಿಶಾ ಸಭೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಎರಡೂ ರಾಜ್ಯಗಳಿಂದ ಜಿಲ್ಲೆಗೆ ನೇರ ಗಡಿ ಪ್ರದೇಶಗಳಿಲ್ಲವಾದರೂ ಕೇರಳದಿಂದ ಬರುವವರು ಹೆಚ್ಚಿದ್ದಾರೆ. ಅವರು ಯಾತಕ್ಕಾಗಿ ಬರುತ್ತಾರೆ, ಹೋಂಸ್ಟೇ, ರೆಸಾರ್ಟ್‍ಗಳಲ್ಲಿ ಉಳಿಯುತ್ತಾರಾ, ಧಾರ್ಮಿಕ ಕೇಂದ್ರಗಳಿಗೆ ಬರುತ್ತಾರಾ ಎನ್ನುವುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ಬಹಳ ದೊಡ್ಡ ಪ್ರಮಾಣದಲ್ಲಿ ಕೇರಳದಿಂದ ಚಿಕ್ಕಮಗಳೂರಿಗೆ ಬಸ್‍ಗಳು ಬರುತ್ತವೆ. ಇಲ್ಲಿ ಬೇರೆ ಬೇರೆ ರೀತಿಯ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ದೂರುಗಳು ಮೊದಲಿನಿಂದಲೂ ಇರುವ ಕಾರಣ ಸೂಕ್ತ ರೀತಿ ನಿಗಾ ವಹಿಸಿ ಗಡಿಗಳಲ್ಲಿ ತಪಾಸಣೆ ನಡೆಸಬೇಕು ಎಂದು ಹೇಳಿದರು.
ಹೊರ ರಾಜ್ಯದ ವಾಹನಗಳ ನಿರ್ಬಂಧಕ್ಕೆ ಸರ್ಕಾರದಿಂದ ಸದ್ಯ ಯಾವುದೇ ನಿರ್ದೇಶನಗಳಿಲ್ಲ. ಆದರೂ ಕೋವಿಡ್ ಪರೀಕ್ಷಾ ವರದಿ ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳು ಏನಾದರೂ ನಡೆಯುತ್ತಿವೆಯೇ ಎನ್ನುವುದರ ಕುರಿತು ಪರಿಶೀಲಿಸಿ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಎಂ.ಹೆಚ್.ಅಕ್ಷಯ್ ತಿಳಿಸಿದರು.
ಕೋವಿಡ್ ಲಾಕ್‍ಡೌನ್ ನಂತರ ನಗರಕ್ಕೆ ಕೇರಳದಿಂದ ಪ್ರವಾಸಿಗರು ಬಸ್‍ಗಳಲ್ಲಿ ಬರುತ್ತಿಲ್ಲ. ಕೇವಲ ಕಾರುಗಳು ಬರುತ್ತಿವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರಪ್ಪ ಶಿರೋಳ್ಕರ್ ತಿಳಿಸಿದರು.
ಈಗ ಮತ್ತೆ ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಜಾಸ್ತಿಯಾಗುತ್ತಿದೆ. ನಮ್ಮಲ್ಲಿ ಸದ್ಯಕ್ಕೆ 20 ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಅದು 40 ಆಗಬಾರದು. ಈ ಹಿನ್ನೆಲೆಯಲ್ಲಿ ಸಂಚಾರಿ ಪರೀಕ್ಷಾ ಘಟಕಗಳನ್ನು ಆರಂಭಿಸುವಂತೆ ಶೋಭಾ ಕರಂದ್ಲಾಜೆ ಸೂಚಿಸಿದರು.
ಪ್ರತಿ ವಾರಾಂತ್ಯದ ದಿನಗಳಲ್ಲಿ ಗಿರಿ ಪ್ರದೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಬರುವ ಕಾರಣ ಕೈಮರಾ ಚೆಕ್‍ಪೋಸ್ಟ್‍ನಲ್ಲಿ ಕೋವಿಡ್ ಪರೀಕ್ಷೆ ನಡೆಸಬೇಕು ಎಂದು ತಾ.ಪಂ. ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೇಶ್ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಈವರೆಗೆ 2,67,886 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 13,973 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 9588 ಮಂದಿ ಹೋಂ ಐಸೋಲೇಶನ್ ಹಾಗೂ 4385 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 13814 ಜನ ಬಿಡುಗಡೆ ಹೊಂದಿದ್ದು, ಹಾಲಿ 20 ಪಾಸಿಟಿವ್ ಪ್ರಕರಣಗಳಿದ್ದು, 139 ಮಂದಿ ಈವರೆಗೆ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯಾಧಿಕಾರಿ ಅಶ್ವಥಬಾಬು ತಿಳಿಸಿದ್ದಾರೆ.
60 ವರ್ಷ ಮೇಲ್ಪಟ್ಟವರಿಗೆ 3ನೇ ಹಂತದ ಲಸಿಕೆ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಮೂರು ಹಂತದಲ್ಲೂ ಅಡ್ಡ ಪರಿಣಾಮ ಕಂಡು ಬಂದಿಲ್ಲ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss