ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ, ಇದರ ನಡುವೆ ಓಮಿಕ್ರಾನ್ ಭೀತಿಯಿಂದ ಜನ ಕಂಗಾಲಾಗಿದ್ದಾರೆ. ಈ ಹಿನ್ನೆಲೆ ಶಾಲಾ ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಮೈಸೂರು, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಕರ್ನಾಟಕ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮ್ಮೇಳನಗಳು, ವಿಚಾರಗೋಷ್ಠಿಗಳು, ಶೈಕ್ಷಣಿಕ ಕಾರ್ಯಕ್ರಮಗಳನ್ನು ಕನಿಷ್ಠ ಎರಡು ತಿಂಗಳ ಕಾಲ ಮುಂದೂಡುವಂತೆ ಸರ್ಕಾರ ಸೂಚಿಸಿದೆ.
ವೈದ್ಯಕೀಯ ಮತ್ತು ಅರೆವೈದ್ಯಕೀಯ ಹಾಗೂ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್-19 ಪರೀಕ್ಷೆ ಕಡ್ಡಾಯ. ಪ್ರತಿದಿನ ಪರೀಕ್ಷೆ ನಡೆಯಬೇಕು ಮತ್ತು ಈಗಾಗಲೇ ನೀಡಿರುವ ಮಾರ್ಗಸೂಚಿ ಅನ್ವಯ ನಡೆದುಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.
ಮುಂದೂಡಲಾಗದ ಕಾರ್ಯಕ್ರಮಗಳಿದ್ದರೆ ಇದನ್ನು ಹೈಬ್ರೀಡ್ ಮೋಡ್ನಲ್ಲಿ ನಡೆಸಲು ಅನುಮತಿ ಇದೆ. ಅಂದರೆ ಕಡಿಮೆ ದೈಹಿಕ ಹಾಜರಾತಿ, ವರ್ಚುಯಲ್ ಮೋಡ್ನಲ್ಲಿ ಕಾರ್ಯಕ್ರಮ ನಡೆಸಬಹುದಾಗಿದೆ.