ದೇವರ ನಾಡಲ್ಲಿ ಕಟೌಟ್‌ ಯುದ್ಧ! ಕೊಹ್ಲಿ ಭವ್ಯ ಕಟೌಟ್‌ಗೆ ಪ್ರತ್ಯುತ್ತರವಾಗಿ ರೋಹಿತ್ ಶರ್ಮಾರ 100 ಅಡಿ ಕಟೌಟ್ ನಿಲ್ಲಿಸಿದ ಅಭಿಮಾನಿಗಳು..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಭಾರತೀಯ ಕ್ರಿಕೆಟ್‌ನ ಎರಡು ಆಧಾರ ಸ್ತಂಭಗಳು. ವಿಶ್ವಕ್ರಿಕೆಟ್‌ ನ ಹಲವು ಅತ್ಯುತ್ತಮ ದಾಖಲೆಗಳನ್ನು ಈ ಇಬ್ಬರು ಆಟಗಾರರೇ ಹಂಚಿಕೊಂಡಿದ್ದಾರೆ. ಇಂತಹ ವಿಶ್ವಶ್ರೇಷ್ಠ ಆಟಗಾರನ್ನು ಒಟ್ಟಿಗೆ ಹೊಂದಿರುವುದಕ್ಕೆ ಇತರೆ ರಾಷ್ಟ್ರಗಳು ಭಾರತದ ಕಡೆ ಅಸೂಯೆಯಿಂದ ನೋಡುತ್ತವೆ. ಆದರೆ ಕೊಹ್ಲಿ- ರೋಹಿತ್‌ ಕೆಲ ಅಭಿಮಾನಿಗಳು ಮಾತ್ರ ತಮ್ಮ ಮೆಚ್ಚಿನ ಆಟಗಾರನೇ ವಿಶ್ವದಲ್ಲಿ ಬೆಸ್ಟ್‌ ಎಂದು ಪರಸ್ಪರ ಯುದ್ಧದಲ್ಲಿ ತೊಡಗಿದ್ದಾರೆ.!
ಕೊಹ್ಲಿ- ರೋಹಿತ್‌ ಅಭಿಮಾನಿಗಳ ಜಿದ್ದಾಜಿದ್ದಿಗೆ ಇದೀಗ ದೇವರ ನಾಡು ಕೇರಳ ಸಾಕ್ಷಿಯಾಗಿದೆ. ಬಹಳ ವರ್ಷಗಳ ಬಳಿಕ ಕೇರಳದ ತಿರುವನಂತಪುರಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಮರಳಿದೆ. ಇದು ಕೇರಳದ ಕ್ರಿಕೆಟ್‌ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ. ಇಂದು ಸೌತ್‌ ಆಫ್ರಿಕಾ ವಿರುದ್ಧ ನಡೆಯಲಿರುವ ಪ್ರಥಮ ಟಿ 20 ಪಂದ್ಯಕ್ಕೂ ಮುನ್ನ ಅಭಿಮಾನಿಗಳು ಪೈಪೋಟಿಯ ಮೇಲೆ ತಮ್ಮ ನೆಚ್ಚಿನ ಆಟಗಾರನ ಕಟೌಟ್‌ ಗಳನ್ನು ನಿಲ್ಲಿಸಿ ಅಭಿಮಾನ ಮೆರೆಯುತ್ತಿದ್ದಾರೆ.
ʼಆಲ್ ಕೇರಳ ವಿರಾಟ್ ಕೊಹ್ಲಿ ಅಭಿಮಾನಿಗಳ ಸಂಘವುʼ  ಪಂದ್ಯ ನಡೆಯುವ ಗ್ರೀನ್‌ಫೀಲ್ಡ್ ಸ್ಟೇಡಿಯಂ ಬಳಿ  ಭಾರತ ತಂಡದ ಮಾಜಿ ನಾಯಕ ಕೊಹ್ಲಿಯ 100 ಅಡಿ ಭವ್ಯ ಕಟೌಟ್ ಅನ್ನು ಹಾಕಿ ಭರ್ಜರಿ ಸ್ವಾಗತ ಕೋರಿದೆ. ಇದಕ್ಕೆ ಪ್ರತ್ಯುತ್ತರವಾಗಿ ʼಅಖಿಲ ಕೇರಳ ರೋಹಿತ್ ಶರ್ಮಾ ಅಭಿಮಾನಿಗಳ ಸಂಘವುʼ ಅದೇ ಪ್ರದೇಶದಲ್ಲಿ ಕ್ಯಾಪ್ಟನ್ ರೋಹಿತ್‌ ಶರ್ಮಾರ 100 ಅಡಿ ದೈತ್ಯ ಕಟೌಟ್‌ ಹಾಕಿ ತಾನೇನು ಕಮ್ಮಿ ಇಲ್ಲ ಎಂದು ತೋರಿಸಿಕೊಂಡಿದೆ!.
ಪಂದ್ಯಕ್ಕೂ ಮುನ್ನ ಸ್ಟೇಡಿಯಂ ಎದುರು ಎರಡು ದೈತ್ಯ ಕಟೌಟ್‌ಗಳು ರಾರಾಜಿಸುತ್ತಿದ್ದು ಪಂದ್ಯವೀಕ್ಷಣೆಗೆ ಕ್ರಿಡಾಂಗಣಕ್ಕೆ ಆಗಮಿಸುತ್ತಿರುವ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

ಒಂದೆಡೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಹೊರಗೆ ಯುದ್ಧವನ್ನು ನಡೆಸುತ್ತಿರುವಾಗಲೇ, ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಮೈದಾನ ಮತ್ತು ಮೈದಾನದಾಚೆಗೂ ಉತ್ತಮ ಬಾಂಧವ್ಯ ಮತ್ತು ಸ್ನೇಹವನ್ನು ಆನಂದಿಸುತ್ತಿದ್ದಾರೆ. ಆಸ್ಟ್ರೇಲಿಯ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಇವರಿಬ್ಬರ ನಡುವಿನ ಇಂತಹದೊಂದು ಅಮೋಘ ಕ್ಷಣವನ್ನು ಕ್ಯಾಮರಾಗಳು ಸೆರೆಹಿಡಿದಿದ್ದವು. ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ ಭರ್ಜರಿ 63 ರನ್ ಗಳಿಸಿ ಮೈದಾನದಿಂದ ಹಿಂತಿರುಗಿದ ವೇಳೆ ಡಗ್ ಔಟ್‌ನಲ್ಲಿದ್ದ ರೋಹಿತ್ ಶರ್ಮಾ ಕೊಹ್ಲಿ ಬಳಿಗೆ ಓಡಿಹೋಗಿ ಅದ್ಭುತ ಆಟಕ್ಕೆ ಬೆನ್ನು ತಟ್ಟಿದರು.


ಆ ಬಳಿಕ ಇಬ್ಬರು ಸ್ನೇಹಿತರು ಮೆಟ್ಟಿಲುಗಳ ಮೇಲೆ ಕುಳಿತು ಚಪ್ಪಳೆ ತಟ್ಟಿ ಆನಂದಿಸುತ್ತಾ ಪಂದ್ಯದ ಉಳಿದ ಭಾಗವನ್ನು ನೋಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ತಮ್ಮಿಬ್ಬರ ನಡುವೆ ಯಾವುದೇ ಪೈಪೂಟಿಯಾಗಲೀ, ಶತೃತ್ವವಾಗಲಿ ಇಲ್ಲ ಎಂದು ಈ ಇಬ್ಬರು ಹಲವಾರು ಬಾರಿ ಸಬೀತುಪಡಿಸುತ್ತಲೇ ಬಂದಿದ್ದಾರೆ. ಕೊಹ್ಲಿ ಕೆಟ್ಟ ಫಾರ್ಮ್‌ ನಲ್ಲಿದ್ದಾಗ ರೋಹಿತ್‌ ಕೊಹ್ಲಿ ಬೆಂಬಲಕ್ಕೆ ನಿಂತಿದ್ದನ್ನು ಸಹ ಸ್ಮರಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!