ಹೊಸ ದಿಗಂತ ವರದಿ, ಕಾಸರಗೋಡು:
ಕೇಂದ್ರ ಸರಕಾರದ ವಿವಿಧ ನೀತಿಗಳನ್ನು ವಿರೋಧಿಸಿ ಸೆ.27ರಂದು ಸೋಮವಾರ ಭಾರತ ಬಂದ್ ಗೆ ಕರೆ ನೀಡಲಾಗಿದ್ದು , ಇದರ ಅಂಗವಾಗಿ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಕೇರಳದಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಹರತಾಳ ನಡೆಯಲಿರುವುದಾಗಿ ಸಂಯುಕ್ತ ಮುಷ್ಕರ ಸಮಿತಿಯ ಕಾಸರಗೋಡು ಜಿಲ್ಲಾ ಪ್ರತಿನಿಧಿಗಳು ಕಾಸರಗೋಡಿನಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೋಟಾರು ವಾಹನ ಕಾರ್ಮಿಕರು, ಕೃಷಿಕರು, ಬ್ಯಾಂಕ್ ಸಿಬ್ಬಂದಿಗಳು ಒಳಗೊಂಡಂತೆ ನೂರಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಈ ಹರತಾಳದಲ್ಲಿ ಪಾಲ್ಗೊಳ್ಳಲಿವೆ. ನಿತ್ಯೋಪಯೋಗಿ ಸಾಮಗ್ರಿಗಳ ದರ ಹೆಚ್ಚಳ, ಇಂಧನ ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆ ಹಾಗೂ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು, ಕೃಷಿಕರಿಗೆ ಮಾರಕವಾಗಿರುವ ಕೃಷಿ ಕಾನೂನು ಮತ್ತು ಉದ್ಯೋಗ ಕಾನೂನು ತಿದ್ದುಪಡಿ ವಿಧೇಯಕ ಹಿಂತೆಗೆಯಬೇಕು, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ತಡೆಗಟ್ಟಬೇಕು ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಹರತಾಳ ನಡೆಯಲಿರುವುದಾಗಿ ಸಿಐಟಿಯು ಸಂಘಟನೆಯ ಮುಖಂಡ ಟಿ.ಕೆ ರಾಜನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.